ಬಂಧಿತ ಅಶ್ವಿನ್ ರಾವ್ ನ್ಯಾಯಾಲಯಕ್ಕೆ ಹಾಜರು: ನೀಡಿದ ಹೇಳಿಕೆ ?

ಮಂಗಳವಾರ, 28 ಜುಲೈ 2015 (14:53 IST)
ಲೋಕಾಯುಕ್ತ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ವಿಶೇಷ ತನಿಖಾ ತಂಡದ ಅಧಿಕಾರಿಗಳಿಂದ ಬಂಧಿತನಾಗಿದ್ದ ಪ್ರಕರಣದ ಒಂದನೇ ಆರೋಪಿ ಅಶ್ವಿನ್ ರಾವ್‌ನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಂಧನ ಸಂಬಂಧ ಹೇಳಿಕೆ ದಾಖಲಿಸಿದ್ದಾನೆ.
 
ಒಂದು ಕೋಟಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಆರೋಪಿಸಲಾದ ಪ್ರಕರಣದ ಪ್ರಮುಖ ಆರೋಪಿ ಎಂದೇ ಹೇಳಲಾಗಿರುವ ಅಶ್ವಿನ್ ರಾವ್‌ನನ್ನು ಎಸ್ಐಟಿ ಅಧಿಕಾರಿಗಳು ನಿನ್ನೆ ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಪ್ರಸ್ತುತ ಬೆಂಗಳೂರಿಗೆ ಕರೆತರಲಾಗಿದ್ದು, ಅಧಿಕಾರಿಗಳು ನಂ. 58ರ ಅಡಿಯಲ್ಲಿ ನಗರದ ನೃಪತುಂಗ ರಸ್ತೆಯಲ್ಲಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ. ಈ ವೇಳೆ ನ್ಯಾಯಾಧೀಶರು ಕೇಳಿದ ಪ್ರಶ್ನೆಗಳಿಗೆ ಅಶ್ವಿನ್ ಉತ್ತರಿಸಿದ್ದು, ಆತನ ಹೇಳಿಕೆಗಳು ಇಂತಿವೆ. 
 
ನ್ಯಾಯಧೀಶರು: ನಿಮ್ಮ ಹೆಸರೇನು ?
ಅಶ್ವಿನ್ ರಾವ್: ಅಶ್ವಿನ್ ಯರಬಾಟಿ.
 
ನ್ಯಾಯಧೀಶರು: ನಿಮ್ಮ ನಿವಾಸ ಹಾಗೂ ಬಂಧನದ ಬಗ್ಗೆ ವಿವರಿಸಿ ?
ಅಶ್ವಿನ್ ರಾವ್: ಹೈದರಾಬಾದ್‌ನ ರೈನ್‌ಬೋ ಅಪಾರ್ಟ್‌ಮೆಂಟ್‌ನಲ್ಲಿ ಕೊಠಡಿಯೊಂದನ್ನು ಬಾಡಿಗೆ ಪಡೆದು ವಾಸಿಸುತ್ತಿದ್ದೆ. ಈ ವೇಳೆ ಬಾಲರಾಜು ಹಾಗೂ ಐವರು ಪೊಲೀಸ್ ಅಧಿಕಾರಿಗಳು ನಮ್ಮ ಮನೆಗೆ ಆಗಮಿಸಿದರು. ಆಗ ಸಮಯ ಬೆಳಗ್ಗೆ 8 ಗಂಟೆಯಾಗಿತ್ತು. ಮಧ್ಯಾಹ್ನ 1.30ರ ವೇಳೆಗೆ ನೋಟಿಸ್ ನೀಡಿ ಆಗಲೇ ನನ್ನನ್ನು ಬಂಧಿಸಿದರು. ಬಳಿಕ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆ ಕುಕಟಪಲ್ಲಿಗೆ ಕರೆದೊಯ್ದು  ಬಂಧನದ ಮಾಹಿತಿ ದಾಖಲಿಸಿದರು. ಆ ಬಳಿಕ ಲಾಡ್ಜ್‌ನ್ನು ಖಾಲಿ ಮಾಡಿ ಬೆಂಗಳೂರಿಗೆ ಹೊರಟೆವು. ರಾತ್ರಿ ಸರಿ ಸುಮಾರು 11 ಗಂಟೆಗೆ ನಗರದ ಎಸ್ಐಟಿ ಕಚೇರಿ ತಲುಪಿದೆವು. ನಂತರ ರಾತ್ರಿ 2.25ರ ವೇಳೆಯಲ್ಲಿ ಬಂಧನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. 
 
ನ್ಯಾಯಧೀಶರು: ಹೈದರಾಬಾದಿನಿಂದ ಕರೆ ತರುವಾಗ ಏನಾದರೂ ಸಮಸ್ಯೆಯನ್ನು ಎದುರಿಸಿದಿರಾ ?
ಅಶ್ವಿನ್ ರಾವ್: ಇಲ್ಲ, ಯಾವುದೇ ರೀತಿಯ ತೊಂದರೆಯಾಗಿಲ್ಲ. 

ವೆಬ್ದುನಿಯಾವನ್ನು ಓದಿ