ನಂದಿತಾ ಸಾವಿನ ಪ್ರಕರಣ ಮುಚ್ಚಿಹಾಕಲು ಸಿಐಡಿ ತನಿಖೆ: ಆಯನೂರು ಆರೋಪ

ಶುಕ್ರವಾರ, 21 ನವೆಂಬರ್ 2014 (12:58 IST)
ನಂದಿತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯಿಸಿದ್ದರೂ ಸರ್ಕಾರ ಪ್ರಕರಣವನ್ನು ಮುಚ್ಚಿಹಾಕಲು ಸಿಐಡಿ ತನಿಖೆಗೆ ಒಪ್ಪಿಸಿದೆ ಎಂದು ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಹೇಳಿದ್ದಾರೆ.

ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಿಬಿಐ ತನಿಖೆಗೆ ಒಪ್ಪಿಸಲು ಸಲಹೆ ನೀಡಿದ್ದರೂ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ ಎಂದು ಮಂಜುನಾಥ್ ಹೇಳಿದರು. ಸಿಬಿಐ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರುವುದೆಂದು ಭಾವಿಸಿದ್ದೇವೆ. ಆದರೆ ಸಿಐಡಿ ತನಿಖೆ ಕೇವಲ ನೆಪಮಾತ್ರಕ್ಕೆ ಎಂದು ಆಯನೂರು ಆರೋಪಿಸಿದರು.

ಇದಲ್ಲದೇ ತನಿಖೆಯ ಹಾದಿಯನ್ನು ಕೂಡ ಕಿಮ್ಮನೆ ತಪ್ಪಿಸಿದ್ದಾರೆ. ಇದರಿಂದಾಗಿ  ಸಿಐಡಿ ಅಧಿಕಾರಿಗಳಿಗೂ ಪ್ರಕರಣ ಭೇದಿಸಲಾಗಿಲ್ಲ. ಇದಿಷ್ಟೇ ಅಲ್ಲದೇ ಸಚಿವ ಕಿಮ್ಮನೆ ಪ್ರಕರಣ ಮುಚ್ಚಿಹಾಕಲು ಕೋಮುಬಣ್ಣ ಬಳಿದಿದ್ದಾರೆ ಎಂದು ಆಯನೂರು ಮಂಜುನಾಥ್ ಆರೋಪಿಸಿದರು. 
 
ತೀರ್ಥಹಳ್ಳಿಯಲ್ಲಿ 8ನೇ ತರಗತಿ ಬಾಲಕಿ ನಂದಿತಾ ಅಪಹರಣ  ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆಗೆ ರಾಜ್ಯಸರ್ಕಾರ ನಿರ್ಧರಿಸಿದ್ದು, ಸಿಎಂ ಸಿದ್ದರಾಮಯ್ಯ ಈ ಕುರಿತು ಆದೇಶ ನೀಡಿದ್ದರು.  ನಂದಿತಾ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ವರದಿಯಾಗಿದ್ದರಿಂದ ಅವಳ ಪ್ರಕರಣ ಹೊಸ ತಿರುವು ಪಡೆದಿತ್ತು.
 
ಉಡುಪಿ-ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ವರದಿಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಹೇಳಲಾಗಿದೆ. ಸ್ತ್ರೀರೋಗ ತಜ್ಞರು ಸೇರಿದಂತೆ ಹಲವರು ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಹೇಳಿದ್ದಾರೆ.

ನಂದಿತಾಳ ಮೇಲೆ ಅತ್ಯಾಚಾರಕ್ಕೆ ದುಷ್ಕರ್ಮಿಗಳು ಯತ್ನಿಸಿದ್ದು, ಅದು ವಿಫಲವಾಗಿದ್ದರಿಂದ ನೀರಿನಲ್ಲಿ ವಿಷ ಬೆರೆಸಿ ಕುಡಿಯಲು ಕೊಟ್ಟಿದ್ದಾರೆಂದು ಹೇಳಲಾಗುತ್ತಿದೆ. ಚಿಕಿತ್ಸೆ ನೀಡುವಾಗ ಬಾಲಕಿಯನ್ನು ವೈದ್ಯರು ಮಾತನಾಡಿಸಿದ್ದು, ಮೂವರು ಯುವಕರು ಬೆಟ್ಟಕ್ಕೆ ಕರೆದುಕೊಂಡು ಹೋಗಿ ನೀರಿನಲ್ಲಿ ಏನನ್ನೋ ಮಿಶ್ರಣ ಮಾಡಿಕೊಟ್ಟಿದ್ದರು. ಬಳಿಕ ಮನೆಗೆ ಬಂದ ಮೇಲೆ ವಾಂತಿಯಾಗತೊಡಗಿತು ಎಂದು ಬಾಲಕಿ ಹೇಳಿಕೆಯಲ್ಲಿ ತಿಳಿಸಿದ್ದಾಗಿ ವೈದ್ಯರು ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ