ವಿದೇಶಿ ಪ್ರದರ್ಶನದಿಂದಲೇ 500 ಕೋಟಿ ಗಳಿಸಿದ 'ಬಾಹುಬಲಿ'

ಸೋಮವಾರ, 3 ಆಗಸ್ಟ್ 2015 (15:56 IST)
ಬಿಡುಗಡೆಗೂ ಮುನ್ನವೇ ಯುವಕರಲ್ಲಿ ಹುಚ್ಚೆಬ್ಬಿಸಿದ್ದ, ಬೃಹತ್ ಬಂಡವಾಳ ಹೂಡಿಕೆಯ ಚಿತ್ರ ಎಂದೇ ಹೇಳಲಾಗುತ್ತಿದ್ದ 'ಬಾಹುಬಲಿ' ಚಿತ್ರ ಪ್ರಸ್ತುತ ಬಿಡುಗಡೆ ಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ವಿದೇಶಗಳಲ್ಲಿಯೂ ಅಬ್ಬರಿಸುವ ಮೂಲಕ ಬರೋಬ್ಬರಿ 500 ಕೋಟಿ ಹಣವನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. 
ಹೌದು, ಕಳೆದ ಜುಲೈ 10ರಂದು ತೆರೆಕಂಡಿದ್ದ ಈ ಚಿತ್ರ ಕರ್ನಾಟಕ, ಆಂಧ್ರ ಪ್ರದೇಶ ತಮಿಳುನಾಡು ಹಾಗೂ ಮಹಾರಾಷ್ಟ್ರ ಸೇರಿದಂತೆ ರಾಷ್ಟ್ರಾದ್ಯಂತ ಅಬ್ಬರಿಸುತ್ತಿತ್ತು. ಅಲ್ಲದೆ ಕೇವಲ ಮೂರು ದಿನಕ್ಕೆ ನಮ್ಮ ದೇಶದಲ್ಲಿಯೇ 60 ಕೋಟಿ ಹಣವನ್ನು ಸಂಗ್ರಹಿಸಿತ್ತು. ಈ ಬೆನ್ನಲ್ಲೇ ವಿಶ್ವದ ಹಲವೆಡೆ ತೆರೆ ಕಂಡಿದ್ದ ಈ ಚಿತ್ರ, ಪ್ರಸ್ತುತ 500 ಕೋಟಿ ಹಣವನ್ನು ವಿದೇಶಿ ಪ್ರದರ್ಶನದಿಂದಲೇ  ಸಂಗ್ರಹಿಸಿದೆ.  
 
ಈ ಮೂಲಕ ವಿಶ್ವದಲ್ಲಿ ಅಬ್ಬರಿಸುವ ಮೂಲಕ ಹೆಚ್ಚು ಹಣ ಗಳಿಸಿದ ದಕ್ಷಿಣ ಭಾರತದ ಮೊದಲ ಚಿತ್ರ ಹಾಗೂ ಭಾರತದ ಮೂರನೇ ಚಿತ್ರ ಎಂಬ ಹೆಗ್ಗಳಿಕೆಗೆ ಬಾಹುಬಲಿ ಪಾತ್ರವಾಗಿದೆ. ಮೊದಲ ಮತ್ತು ಎರಡನೇ ಸ್ಥಾನಗಳಲ್ಲಿ ಹಿಂದಿ ಭಾಷಾ ಚಿತ್ರಗಳಾದ ಪಿಕೆ ಮತ್ತು ಧೂಮ್-3 ಚಿತ್ರಗಳು ಹೆಚ್ಚು ಹಣ ಗಳಿಸಿದ್ದವು.  
 
ಐತಿಹಾಸಿಕ ಕಥಾ ಹಂದರವನ್ನು ಹೊಂದಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ರಾಜಮೌಳಿ ಅವರು ನಿರ್ದೇಶಿಸಿದ್ದು, ಚಿತ್ರದ ತಾರಾಗಣದಲ್ಲಿ ಪ್ರಭಾಸ್ ನಾಯಕನಾಗಿ ಕಾಣಿಸಿಕೊಂಡಿದ್ದರೆ ಖಳ ನಾಯಕನಾಗಿ ರಾಣಾ ದಗ್ಗುಬಾಟಿ ಬಣ್ಣ ಹಚ್ಚಿ ಪ್ರೇಕ್ಷಕರ ಮನ ಸೆಳೆದಿದ್ದಾರೆ. ಇನ್ನು ನಾಯಕಿಯರಾಗಿ ತಮನ್ನಾ ಮತ್ತು ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದು, ಪ್ರಮುಖ ಪಾತ್ರಾಧಾರಿಗಳಾಗಿ ಅಭಿನಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ