ಮೇಕೆದಾಟು ಯೋಜನೆ ವಿರೋಧ: ತಮಿಳುನಾಡಿನಲ್ಲಿ ರೈತ ಸಂಘಗಳ ಬಂದ್ ಕರೆ ವಿಫಲ

ಶನಿವಾರ, 28 ಮಾರ್ಚ್ 2015 (17:13 IST)
ಕರ್ನಾಟಕ ಸರಕಾರ ಮೇಕೆದಾಡುವಿನಲ್ಲಿ ಚೆಕ್ ಡ್ಯಾಮ್ ನಿರ್ಮಿಸುತ್ತಿರುವುದನ್ನು ವಿರೋಧಿಸಿ ತಮಿಳುನಾಡು ರೈತರು ಭಾರಿ ಪ್ರತಿಭಟನೆ ಆರಂಭಿಸಿದ್ದು, ಬಂದ್ ಕರೆ ಘೋಷಿಸಿದ್ದಾರೆ.

ಚೆನ್ನೈ, ಮಧುರೈ ಮತ್ತು ಕೊಯಿಮುತ್ತೂರ್‌ಗಳಲ್ಲಿ ಕೆಲ ಅಂಗಡಿ ಮುಗ್ಗಟ್ಟುಗಳು ಮಾತ್ರ ಬಂದ್ ಮಾಡಲಾಗಿದ್ದು, ಬಂದ್ ಕರೆಯಿಂದ .ಯಾವುದೇ ರೀತಿಯ ಪ್ರಭಾವ ಬೀರಿಲ್ಲ ಎಂದು ಮೂಲಗಳು ತಿಳಿಸಿವೆ.

ಆದರೆ, ರಾಜ್ಯದಲ್ಲಿ ಅಧಿಕಾರರೂಢವಾಗಿರುವ ಎಐಎಡಿಎಂಕೆ ಪಕ್ಷ ರೈತರ ಪ್ರತಿಭಟನೆ ಸ್ಪಂದಿಸದಿರುವುದು ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.

ಕೇಂದ್ರ ಸರಕಾರ ಕರ್ನಾಟಕ ರಾಜ್ಯದ ಯೋಜನೆಗಳು ಜಾರಿಯಾಗದಂತೆ ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ಪ್ರಾಧಿಕಾರದ ಮೇಲೆ ಒತ್ತಡ ತರಲಿ ಎನ್ನುವ ಉದ್ದೇಶದಿಂದ ಬಂದ್ ಘೋಷಿಸಲಾಗಿದೆ ಎಂದು ರೈತ ಸಂಘಟನೆಗಳು ತಿಳಿಸಿವೆ.

ಮಾಜಿ ಶಾಸಕ ವೇಲುಮುರುಗನ್ ನೇತೃತ್ವದ ತಮಿಳಗ ವಲ್ಲುರಿಮೈ ಪಕ್ಷ ನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ರೈತರ ಸಹಕಾರ ಸಮನ್ವಯ ಸಮಿತಿಯ ಮುಖ್ಯಸ್ಥ ಪಿ.ಆರ್.ಪಾಂಡಿಯನ್ ಮಾತನಾಡಿ, ರಾಜ್ಯದಾದ್ಯಂತ ರೇಲ್ ರೋಕ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ, ತಮಿಳುನಾಡು ಗಡಿಭಾಗಗಳಲ್ಲಿ ಭಾರಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳನ್ನು ಎದುರಿಸಲು ಸಜ್ಜಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ