ಪರಿಶೀಲನಾ ಸಭೆ: ಸಚಿವ-ಶಾಸಕರ ನಡುವೆ ತೀವ್ರ ಮಾತಿನ ಚಕಮಕಿ

ಶನಿವಾರ, 3 ಅಕ್ಟೋಬರ್ 2015 (15:38 IST)
ಇಂದು ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿದ್ದ ವೇಳೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಜಿಲ್ಲಾ ಉಸ್ತುವಾರಿ, ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. 
 
ಹೌದು, ಜಿಲ್ಲಾ ಉಸ್ತುವಾರಿಯನ್ನು ವಹಿಸಿಕೊಂಡಿರುವ ಕಾರಣ ಇಂದು ಸಚಿವ ಜಾರ್ಜ್ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದರು. ಇದರಲ್ಲಿ ಜಿಲ್ಲೆಯ ಶಾಸಕರೂ ಸೇರಿದಂತೆ ಇತರೆ ಉನ್ನತ ಅಧಿಕಾರಿಗಳ ವರ್ಗ ಸೇರಿತ್ತು. ಈ ವೇಳೆ ಚರ್ಚೆ ನಡೆಯುತ್ತಿದ್ದಾಗ ಶಾಸಕ ಅಪ್ಪಚ್ಚು ರಂಜನ್ ಅವರು ಜಿಲ್ಲೆಗೆ ನೀವು ಮೊದಲಾರ್ಧದಲ್ಲಿ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾಗ ಖುಷಿಪಟ್ಟಿದ್ದೆ. ಕಾರಣ ನೀವು ಇಲ್ಲಿಯವರೇ ಆಗಿದ್ದು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೀರಿ ಎಂದು. ಆದರೆ ನಿಮ್ಮ ಸಾಧನೆ ಶೂನ್ಯ. ನಿಮಗೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಆಸಕ್ತಿ ಇಲ್ಲ. ಸಚಿವರಾಗಿರುವ ನೀವು ಸಾಮಾನ್ಯ ಜನರಿಗೆ ಸಿಗುತ್ತಿಲ್ಲ. ಹಾಗಾಗಿ ಶಾಸಕರಾದ ನಮ್ಮನ್ನು ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಪ್ರಶ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮರಳಿಗೆ ಸಾಕಷ್ಟು ಅಭಾವವಿದ್ದು, ಅದನ್ನು ಪರಿಹರಿಸಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. 
 
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾವ ಕೆಲಸವನ್ನು ಯಾವಾಗ ಮಾಡಬೇಕು ಎಂಬ ಬಗ್ಗೆ ನನಗೆ ಅರಿವಿದೆ. ಆ ಸಮಸ್ಯೆ ಬಗೆಹರಿಸಲು ನಾನು ಪ್ರತ್ಯೇಕ ಸಭೆ ನಡೆಸುತ್ತೇನೆ. ಆದರೆ ಶಾಸಕರಾದ ನಿಮಗೆ ಮಾತಿನಲ್ಲಿ ಇತಿಮಿತಿ ಇರಲಿ ಎಂದು ಏರು ಧ್ವನಿಯಲ್ಲಿ ಉತ್ತರಿಸಿದರು. ಇದಕ್ಕೆ ಶಾಸಕ ಅಪ್ಪಚ್ಚು ರಂಜನ್ ಅವರೂ ಕೂಡ ಪ್ರತಿಕ್ರಿಯಿಸಿ, ಎಲ್ಲಿ ಯಾವ ರೀತಿ ಮಾತನಾಡಬೇಕು ಎಂಬ ಬಗ್ಗೆ ನನಗೆ ತಿಳಿದಿದೆ. ಸಂವಿಧಾನ ವಿರೋಧಿ ಪದಗಳನ್ನೇನು ನಾನು ಬಳಸುತ್ತಿಲ್ಲ. ಮೊದಲು ತಿಳಿದುಕೊಳ್ಳಬೇಕಾದುದನ್ನು ನೀವು ಅರಿತುಕೊಳ್ಳಿ ಎಂದು ತಿರುಗೇಟು ನೀಡಿದರು. 
 
ಬಳಿಕ ಸಭೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಶಾಸಕ ಕೆ.ಜೆ.ಬೋಪಯ್ಯ ಅವರು ಶಾಸಕ ಅಪ್ಪಚ್ಚು ರಂಜನ್ ಅವರನ್ನು ಶಾಂತಗೊಳಿಸುವ ಮೂಲಕ ವಾಗ್ವಾದ ಸುಖಾಂತ್ಯಗೊಂಡಿತು. ಬಳಿಕ ಸಚಿವರೂ ಕೂಡ ಮರಳು ಅಭಾವ ಶಮನಗೊಳಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ವೆಬ್ದುನಿಯಾವನ್ನು ಓದಿ