ಬಿಬಿಎಂಪಿ ವಿಭಜನೆ ವಿಚಾರ: ಸರ್ಕಾರದ ನಿರ್ಧಾರದ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿದ ಗೌಡರು

ಶನಿವಾರ, 11 ಏಪ್ರಿಲ್ 2015 (10:57 IST)
ಬಿಬಿಎಂಪಿ ವಿಭಜನೆಗೆ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಜೆಡಿಎಸ್ ವಿರೋಧಿಸುತ್ತಿದ್ದು, ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಇಂದು ರಾಜ್ಯದ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ವಿಭಜನೆಗೆ ಅವಕಾಶ ನೀಡಬಾರದೆಂದು ಮನವಿ ಮಾಡಿದ್ದಾರೆ. 
 
ಇಂದು ಬೆಳಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಗೌಡರು, ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು, ಸರ್ಕಾರದ ನಿರ್ಧಾರ ಹಾಗೂ ಅದರ ಪರಿಣಾಮದಿಂದಾಗುವ ಎಲ್ಲಾ ಸಮಸ್ಯೆಗಳ ಬಗ್ಗೆ ರಾಜ್ಯಪಾಲರಲ್ಲಿ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಇಂದು 11.30ಕ್ಕೆ ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದು, ಚರ್ಚೆ ವೇಳೆಯ ಎಲ್ಲಾ ವಿಷಯಗಳನ್ನು ಸಾರ್ವಜನಿಕವಾಗಿ ಪ್ರಸ್ತುತ ಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ. 
 
ಚರ್ಚೆಯಲ್ಲಿ ಸರ್ಕಾರದ ನಿರ್ಧಾರ ಹಾಗೂ ಸುಗ್ರೀವಾಜ್ಞೆಯನ್ನು ಗೌಡರು ವಿರೋಧಿಸಿದ್ದು, ಸರ್ಕಾರದ ನಿರ್ಧಾರದಿಂದ ಕೇವಲ ಸಿಬ್ಬಂದಿಗಳ ಸಂಖ್ಯೆ ಅಧಿಕವಾಗಲಿದೆಯೇ ಹೊರತು ಬೆಂಗಳೂರಿನ ಅಭಿವೃದ್ಧಿ ಅಸಾಧ್ಯ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆಗೆ ತಾವು ಸಹಿ ಹಾಕಬಾರದು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. 
 
ಇನ್ನು ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ನೆಪದಲ್ಲಿರುವ ಸರ್ಕಾರ, ಪಾರದರ್ಶಕ ಆಡಳಿತವನ್ನು ನಡೆಸುವ ಸಲುವಾಗಿ ಬಿಬಿಎಂಪಿ ವಿಭಜನೆಗೆ ಕೈ ಹಾಕುತ್ತಿದೆ ಎಂದು ಆರೋಪಿಸಿದ್ದ ಜೆಡಿಎಸ್ ಕಳೆದ ಗುರುವಾರ ಸರ್ಕಾರದ ವಿರುದ್ಧ ತಮ್ಮ ಪಕ್ಷದ ನೂತನ ಕಚೇರಿಯಿಂದ ಫ್ರೀಢಂ ಪಾರ್ಕ್ ವರೆಗೆ ಪ್ರತಿಭಟನಾ ರ್ಯಾಲಿಯನ್ನೂ ಹಮ್ಮಿಕೊಂಡಿತ್ತು. 
 
ಇತ್ತೀಚೆಗೆ ಸಂಪುಟ ಸಭೆ ಕರೆದಿದ್ದ ಸಿಎಂ ಸಿದ್ದರಾಮಯ್ಯನವರು, ಆಡಳಿತವನ್ನು ಪಾರದರ್ಶಕತೆಗೊಳಿಸುವ ದೃಷ್ಟಿಯಿಂದ ಬಿಬಿಎಂಪಿಯನ್ನು ಸುಗ್ರೀವಾಜ್ಞೆ ಹೊರಡಿಸಿ ವಿಭಜಿಸಲು ತೀರ್ಮಾನಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರನ್ನು ಒಡೆಯಬಾರದು ಎಂಬುದು ವಿರೋಧ ಪಕ್ಷಗಳ ಒಕ್ಕೊರಲಿನ ಧ್ವನಿಯಾಗಿದೆ.  

ವೆಬ್ದುನಿಯಾವನ್ನು ಓದಿ