ಬಿಬಿಎಂಪಿ ಚುನಾವಣೆ ವಿಚಾರ: ಸರ್ಕಾರದ ಮೇಲ್ಮನವಿ ಅರ್ಜಿ ವಿಚಾರಣೆ ಇಂದು

ಶುಕ್ರವಾರ, 10 ಏಪ್ರಿಲ್ 2015 (12:32 IST)
ಬಿಬಿಎಂಪಿ ಚುನಾವಣೆ ಸಂಬಂಧ ಹೈಕೋರ್ಟ್‌ನ ಏಕ ಸದಸ್ಯತ್ವ ಪೀಠ ಈ ಹಿಂದೆ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಇಂದೇ ವಿಚಾರಣೆ ನಡೆಸಬೇಕು ಎಂದು ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಪೊನ್ನಣ್ಣ ಅವರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಇಂದು ಮೆಮೋ ಸಲ್ಲಿಸಿದ್ದಾರೆ.
 
ಹೆಚ್ಚುವರಿ ಎಜಿ ಪೊನ್ನಣ್ಣ ಅವರು ಸರ್ಕಾರದ ಪರವಾಗಿ ಮೆಮೊ ಸಲ್ಲಿಸಿದ್ದು, ಮೆಮೊದಲ್ಲಿ ಬಿಬಿಎಂಪಿ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮೀಸಲಾತಿ ಪಟ್ಟಿಯನ್ನು ಸಿದ್ಧಗೊಳಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸಿ, ಬಳಿಕ ಮೇ 30ರ ಒಳಗೆ ಚುನಾವಣೆಯನ್ನು ನಡೆಸಲು ಕ್ರಮ ಕೈಗೊಳ್ಳಿ ಎಂದು ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶಿಸಿತ್ತು. ಆದ್ದರಿಂದ ಹೈಕೋರ್ಟ್‌ನ ಏಕ ಸದಸ್ಯತ್ವ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಆದರೆ ಕೋರ್ಟ್ ಅರ್ಜಿಯನ್ನು ಇನ್ನೂ ವಿಚಾರಣೆ ನಡೆಸಲು ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಕೋರಿ ಮೆಮೊ ಸಲ್ಲಿಸಿದ್ದಾರೆ.  ಇದಕ್ಕೆ ವಿಭಾಗೀಯ ಪೀಠವೂ ಕೂಡ ಒಪ್ಪಿಗೆ ಸೂಚಿಸಿದ್ದು, ಅರ್ಜಿಯು ಇಂದು ಮಧ್ಯಾಹ್ನ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. 
 
ಆಡಳಿತದಲ್ಲಿ ಪಾರದರ್ಶಕತೆ ತರುವ ದೃಷ್ಟಿಯಿಂದ ಸರ್ಕಾರವು ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ನಿರ್ಧಾರ ಕೈಗೊಂಡಿತ್ತು.  ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಚುನಾವಣೆಯನ್ನು ಆದಷ್ಟು ಬೇಗ ನಡೆಸಬೇಕೆಂದು ಬಿಬಿಎಂಪಿಯ ಇಬ್ಬರು ಕಾರ್ಪೊರೇಟರ್‌‍ಗಳು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠ, ಚುನಾವಣೆಯನ್ನು 30ರೊಳಗೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಆದ್ದರಿಂದ ಆದೇಶವನ್ನು ಪ್ರಶ್ನಿಸಿರುವ ಸರ್ಕಾರ, ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ. 

ವೆಬ್ದುನಿಯಾವನ್ನು ಓದಿ