ಬಿಬಿಎಂಪಿ ಚುನಾವಣೆ ವಿಚಾರ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ

ಮಂಗಳವಾರ, 28 ಏಪ್ರಿಲ್ 2015 (15:53 IST)
ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿರುವ ತೀರ್ಪನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗವು ಇಂದು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ. 
 
ಅರ್ಜಿ ಸಲ್ಲಿಸಿರುವ ಆಯೋಗ ತನ್ನ ಅರ್ಜಿಯಲ್ಲಿ ಚುನಾವಣೆಯನ್ನು ನಡೆಸಲು ಹೈಕೋರ್ಟ್ ಸರ್ಕಾರಕ್ಕೆ ಕಾಲಾವಕಾಶ ನೀಡಿದ್ದು, ಆ ಮೂಲಕ ಸಂವಿಧಾನ ವಿರೋಧಿ ಚಟುವಟಿಕೆಗೆ ಆದ್ಯತೆ ನೀಡಿದಂತಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ರದ್ದುಗೊಳಿಸಿ ಶೀಘ್ರದಲ್ಲಿಯೇ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡಿದೆ. 
 
ಪ್ರಕರಣದ ಹಿನ್ನೆಲೆ: ಆಡಳಿತದಲ್ಲಿ ಪಾರದರ್ಶಕತೆ ತರುವ ಹಿನ್ನೆಲೆಯಲ್ಲಿ ಬಿಬಿಎಂಪಿಯನ್ನು ವಿಭಜಿಸಲು ಸರ್ಕಾರ ಮುಂದಾಗಿದ್ದು, ಚುನಾವಣೆಯನ್ನು ಬೇಗ ನಡೆಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಸರ್ಕಾರಕ್ಕೆ ಅವಕಾಶ ನೀಡಬೇಕೆಂದು ಸರ್ಕಾರದ ಪರವಾಗಿ ಅಟಾರ್ನಿ ಜನರಲ್  ಪ್ರೊ.ರವಿವರ್ಮಕುಮಾರ್ ಅವರು ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್‌ನ ವಿಭಾಗೀಯ ಪೀಠ, ಸರ್ಕಾರಕ್ಕೆ ತಡವಾಗಿ ಚುನಾವಣೆ ನಡೆಸಲು ಅವಕಾಶ 6 ತಿಂಗಳ ಕಾಲಾವಕಾಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಮೇಲ್ಮನವಿ ಸಲ್ಲಿಸಿದೆ. 
 
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ವಿಭಾಗೀಯ ಪೀಠ ತೀರ್ಪು ನೀಡುವ ಮುನ್ನ ಹೈಕೋರ್ಟ್‌ನ ಏಕ ಸದಸ್ಯ ಪೀಠ ವಿಭಜನೆ ನಪ ಹೇಳಿಕೊಂಡು ಚುನಾವಣೆಯನ್ನು ಮುಂದೂಡದೆ ಶೀಘ್ರವೇ ಚುನಾವಣೆ ನಡೆಸಿ ಎಂದು ಆದೇಶಿಸಿತ್ತು. ಬಳಿಕ ಏಕ ಸದಸ್ಯ ಪೀಠದ ಆದೇಶವನ್ನು ಪ್ರಸ್ನಿಸಿ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಸರ್ಕಾರ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಆದ್ದರಿಂದ ಸರ್ಕಾರದ ಪರವಾಗಿ ಆದೇಶ ಹೊರಬಿದ್ದಿತ್ತು. 

ವೆಬ್ದುನಿಯಾವನ್ನು ಓದಿ