ಬಿಬಿಎಂಪಿ ಚುನಾವಣೆ: 8 ವಾರಗಳ ಕಾಲ ಮುಂದೂಡಿದ ಸುಪ್ರೀಂ

ಶುಕ್ರವಾರ, 3 ಜುಲೈ 2015 (14:27 IST)
ರಾಜ್ಯ ಚುನಾವಣಾ ಆಯೋಗವು ಬಿಬಿಎಂಪಿ ಚುನಾವಣೆಗೆ ಅಧಿಕೃತ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ಬಳಿಕವೂ ಕೂಡ ಚುನಾವಣೆಯನ್ನು ಮುಂದೂಡುವ ಸರ್ಕಾರದ ಕಾರ್ಯತಂತ್ರ ಕೊನೆಗೂ ಫಲಿಸಿದೆ.  
 
ಮುಖ್ಯ ನ್ಯಾ. ಹೆಚ್.ಎಲ್.ದತ್ತು ಅವರಿರುವ ಏಕ ಸದಸ್ಯ ಪೀಠ ಸರ್ಕಾರ ಚುನಾವಣೆ ಮುಂದೂಡುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದು, ಚುನಾವಣೆಯನ್ನು 8 ವಾರಗಳ ಕಾಲ ಮುಂದೂಡಿ ಆದೇಶಿಸಿದೆ. 
 
ಹಿನ್ನೆಲೆ ವಿವರ: 2011ರ ಜನಗಣತಿ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡನೆ ಮಾಡಿ ನೂತನ ಮೀಸಲಾತಿ ಪಟ್ಟಿ ತಯಾರಿಸಿ ಚುನಾವಣೆ ನಡೆಸಲು ಅವಕಾಶ ನೀಡಬೇಕೆಂದು ಕೋರಿ ಸರ್ಕಾರ ಹೈಕೋರ್ಟ್‌ನಲ್ಲಿ ಅರ್ಜಿ ಸ್ಲಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆಗಸ್ಟ್ 5 ರ ಒಳಗೆ 2001ರ ಜನಗಣತಿಯಂತೆಯೇ ಚುನಾವಣೆ ನಡೆಸಲು ಸೂಚಿಸಿ ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಆದೇಶ ನೀಡಿದೆ. 
 
ಇನ್ನು ಹೈಕೋರ್ಟ್ ಅವಕಾಶ ನೀಡಲು ನಿರಾಕರಿಸಿದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡು ಮತದಾನದ ದಿನಾಂಕವನ್ನು ಪ್ರಕಟಿಸಿತ್ತು. ಆದರೆ ಪ್ರಸ್ತುತ ಎಲ್ಲಾ ವ್ಯರ್ಥವಾದಂತಾಗಿದೆ. ಚುನಾವಣಾ ಆಯೋಗವು ಜುಲೈ 28ರಂದು ಮತದಾನ ನಡೆಸಲು ಸಿದ್ಧವಾಗಿತ್ತು. 

ವೆಬ್ದುನಿಯಾವನ್ನು ಓದಿ