ಬಿಬಿಎಂಪಿ : ಶಾಸಕರು, ಸಂಸದರ ಮತದಾನದ ಹಕ್ಕು ಪ್ರಶ್ನಿಸಿದ ಅರ್ಜಿ ವಜಾ

ಶುಕ್ರವಾರ, 27 ನವೆಂಬರ್ 2015 (16:32 IST)
ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಆಯ್ಕೆ ಸಂಬಂಧ ಶಾಸಕರು, ಸಂಸದರ ಮತದಾನದ ಹಕ್ಕು ಪ್ರಶ್ನಿಸಿದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದೆ. ಬಿಜೆಪಿಯ  ಐವರು ಕಾರ್ಪೊರೇಟರ್‌ಗಳು ಅರ್ಜಿ ಸಲ್ಲಿಸಿದ್ದರು.  ಬಿಜೆಪಿ ಸರ್ಕಾರವೂ ಕೂಡ ಇದೇ ಸಂಪ್ರದಾಯವನ್ನು ಹಿಂದೆಯೂ ಅನುಸರಿಸಿದೆ. ಶಾಸಕರು, ಸಂಸದರ ಮತದಾನದ ಹಕ್ಕು ಸಂವಿಧಾನಬದ್ಧವಾಗಿದೆ. ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ಪದ್ಧತಿಯನ್ನು ರದ್ದುಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಏಕಸದಸ್ಯ ಪೀಠದ ನ್ಯಾಯಮೂರ್ತಿ ಆರ್.ಎಸ್. ಚೌಹಾನ್ ಅಭಿಪ್ರಾಯಪಟ್ಟರು.
 
ಬಿಬಿಎಂಪಿ ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಮತದಾನದ ಹಕ್ಕು ನೀಡಬಾರದು ಎಂದು ಬಿಜೆಪಿಯ ಪಾಲಿಕೆ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು.  ಬಿಜೆಪಿಯ ಪಾಲಿಕೆ ಸದಸ್ಯರಾದ ಎಂ. ಪ್ರಮೀಳಾ, ಆರ್‌.ಪ್ರತಿಮಾ, ದೀಪಾ ನಾಗೇಶ್‌, ಉಮಾವತಿ ಪದ್ಮರಾಜ್‌, ಕುಮಾರಿ ಪಳನಿಕಾಂತ್‌ ಅವರು ಈ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಮೂರ್ತಿ ಆರ್‌.ಎಸ್‌. ಚೌಹಾಣ್‌ ಅವರಿದ್ದ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆಯನ್ನು ನಡೆಸಿತ್ತು.

ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿದ್ದ ಅಡ್ವೊಕೇಟ್‌ ಜನರಲ್‌ ಪ್ರೊ.ರವಿವರ್ಮ ಕುಮಾರ್‌ ಅವರು, 22  ವರ್ಷಗಳ ಹಿಂದೆಯೇ ಈ ಕುರಿತು ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದ್ದು,  ಸಂವಿಧಾನಬದ್ಧವಾಗಿಯೇ ಮತದಾನದ ಹಕ್ಕು ನೀಡಲಾಗಿದೆ. ಈ ಅರ್ಜಿ ರಾಜಕೀಯ ಪ್ರೇರಣೆಯಿಂದ ಕೂಡಿದೆ ಎಂದು ತಮ್ಮ ವಾದವನ್ನು ಮಂಡಿಸಿದ್ದರು. 
 

ವೆಬ್ದುನಿಯಾವನ್ನು ಓದಿ