ಬಿಬಿಎಂಪಿ ಗದ್ದುಗೆ ಕೈ ತಪ್ಪುವ ಭೀತಿ: ಅಶೋಕ್‌ಗೆ ಆರ್ಎಸ್ಎಸ್ ನಾಯಕರ ತರಾಟೆ

ಮಂಗಳವಾರ, 1 ಸೆಪ್ಟಂಬರ್ 2015 (14:34 IST)
ಬಿಬಿಎಂಪಿ ಚುನಾವಣೆಯಲ್ಲಿ 100 ವಾರ್ಡ್‌ಗಳನ್ನು ತಮ್ಮ ತೆಕ್ಕೆಗೆ ಬರುವಂತೆ ಮಾಡಿ ಪ್ರಶಂಸೆಗೊಳಗಾಗಿದ್ದ ಬಿಬಿಎಂಪಿಯ ಬಿಜೆಪಿ ಚುನಾವಣಾ ಉಸ್ತುವಾರಿ, ಬಿಜೆಪಿ ಶಾಸಕ ಆರ್.ಅಶೋಕ್ ಅವರು ಪ್ರಸ್ತುತ ಪೇಚಿಗೆ ಸಿಲುಕಿದ್ದು, ವಿಲಿವಿಲಿ ಒದ್ದಾಡುವಂತಾಗಿದೆ.  
 
ಹೌದು, ಚುನಾವಣೆ ಬಳಿಕ ಗದ್ದುಗೆ ಏರುವುದು ಖಚಿತ ಎಂದು ಬೀಗುತ್ತಿದ್ದ ಬಿಜೆಪಿಯ ಅಭ್ಬರ ಪ್ರಸ್ತುತ ತುಸು ತಣ್ಣಗಾಗಿದ್ದು, ಅಧಿಕಾರದ ಗದ್ದುಗೆಗಾಗಿ ಪರದಾಡುತ್ತಿದೆ. ಫಲಿತಾಂಶದ ಬಳಿಕ 8 ಮಂದಿ ಪಕ್ಷೇತರರು ಬೆಂಬಲ ನೀಡಲು ಸಜ್ಜಾಗಿದ್ದರೂ ಕೂಡ ನಾಯಕ ಅಶೋಕ್ ಅವರ ಕಡೆಗಣನೆಯಿಂದ ಪ್ರಸ್ತುತ ಪಕ್ಷೇತರ ಕಾರ್ಪೊರೇಟರ್‌ಗಳು ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ. 
 
ಈ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ನಾಯಕರು ಅಶೋಕ್ ವಿರುದ್ಧ ದೂರವಾಣಿ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಮನೆ ಬಾಗಿಲಿಗೆ ಬಂದವರನ್ನು ಕಡೆಗಣಿಸಿದ್ದೀರಿ. ಇದರಿಂದ ಈ ಪರಿಸ್ಥಿತಿ ಬಂದೊದಗಿದೆ. ಅವರನ್ನು ಮನವೊಲಿಸಿದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ, ಮೇಯರ್ ಆಯ್ಕೆಯಲ್ಲಿ ಜೆಡಿಎಸ್ ಆಟವಾಡುತ್ತಿದೆ. ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. 

ವೆಬ್ದುನಿಯಾವನ್ನು ಓದಿ