ವಿದ್ಯುತ್ ಬಿಲ್ ದುಬಾರಿ: ಶವ ಸಂಸ್ಕಾರ ಶುಲ್ಕ ಹೆಚ್ಚಿಸಿದ ಬಿಬಿಎಂಪಿ

ಶನಿವಾರ, 3 ಅಕ್ಟೋಬರ್ 2015 (18:58 IST)
ಬಿಬಿಎಂಪಿಯು ತನ್ನ ಖಾಲಿಯಾಗಿರುವ ಖಜಾನೆಯ ಸ್ವಲ್ಪ ಭಾಗವನ್ನು ತುಂಬಿಸಿಕೊಳ್ಳಲು ನೂತನ ತಂತ್ರವನ್ನು ರೂಪಿಸಿದ್ದು, ಇನ್ನು ಮುಂದೆ ವಿದ್ಯುತ್ ಚಿತಾಗಾರದಲ್ಲಿ ಶವ ಸಂಸ್ಕಾರ ಮಾಡಲು ಸರ್ಕಾರಕ್ಕೆ ಭರಿಸಲಾಗುವ ಶುಲ್ಕದಲ್ಲಿ ಕೊಂಚ ದುಬಾರಿ ಮಾಡಿದೆ. 
 
ಹೌದು, ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ಈ ಸಂಬಂಧ ಪ್ರಸ್ತಾವನೆ ಸಿದ್ಧಪಡಿಸಿ ಇಂದು ಮೇಯರ್ ನೇತೃತ್ವದಲ್ಲಿ ನಡೆದ ಕಾರ್ಪೊರೇಟರ್ಸ್ ಸಭೆಯಲ್ಲಿ ಅನುಮೋದನೆಯನ್ನೂ ಕೂಡ ಪಡೆದಿದ್ದಾರೆ. 
 
ಈ ಸಂಬಂಧ ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಬೆಂಗಳೂರು ನಗರದಲ್ಲಿ ಒಟ್ಟು 12 ವಿದ್ಯುತ್ ಚಿತಾಗಾರಗಳಿವೆ. ಇವುಗಳಿಗೆ ಪ್ರತಿಯೊಂದಕ್ಕೂ ಕೂಡ ದಿನಕ್ಕೆ 10 ಶವಗಳು ಬರುತ್ತಿವೆ. ಪರಿಣಾಮ ಅವುಗಳ ವಾರ್ಷಿಕ ವಿದ್ಯುತ್ ಬಿಲ್ 15 ಲಕ್ಷ ದಾಟುತ್ತಿದೆ. ಈ ಹಿಂದೆ ಒಂದು ಹೆಣದ ಶವ ಸಂಸ್ಕಾರಕ್ಕೆ 50 ರೂ. ವಿಧಿಸಲಾಗುತ್ತಿತ್ತು. ಆದರೆ ಆ ಶುಲ್ಕವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಒಂದು ಶವ ಸಂಸ್ಕಾರಕ್ಕೆ 250ರಿಂದ 300 ರೂ. ಶುಲ್ಕ ವಿಧಿಸಲಿದ್ದೇವೆ. ಈ ಪದ್ಧತಿ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ ಎಂದರು. 
 
ಇದೇ ವೇಳೆ, ಈ ಹಿಂದೆ ಒಂದು ಶವ ಸಂಸ್ಕಾರಕ್ಕೆ 1200 ರೂ. ಬಿಬಿಎಂಪಿ ಹೆಗಲಿಗೆ ಬೀಳುತ್ತಿತ್ತು. ಈ ಹಿನ್ನೆಲೆಯಲ್ಲಿ ಇದು ದುಬಾರಿಯಾಗಿದ್ದು, ಬಿಬಿಎಂಪಿಗೆ ಭರಿಸಲು ಸಾಧ್ಯವಾಗುತ್ತಿಲ್ಲ. ಕಾರಣ ಅರ್ಧ ಹಣವನ್ನು ಇಂಧನ ಇಲಾಖೆಯೇ ಭರಿಸುವಂತೆ ಪತ್ರ ಬರೆಯಲಾಗಿತ್ತು. ಅದಕ್ಕೆ ಇಲಾಖೆ ಕೂಡ ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯು ಒಟ್ಟು ಹಣದ ಅರ್ಧ ಭಾಗದಷ್ಟು ಹಣವನ್ನು ಮಾತ್ರ ಭರಿಸಲಿದೆ ಎಂದು ಸ್ಪಷ್ಟಪಡಿಸಿದರು.  

ವೆಬ್ದುನಿಯಾವನ್ನು ಓದಿ