ಲಂಚಾವತಾರ: ಕೊಠಡಿಗೆ ಬೀಗ ಹಾಕಿ ಕಾರ್ಯನಿರ್ವಹಿಸುವ ಬಿಡಿಎ ಅಧಿಕಾರಿಗಳು...?!

ಮಂಗಳವಾರ, 27 ಜನವರಿ 2015 (17:51 IST)
ನಗರದ ಬಿಡಿಎ ಅಧಿಕಾರಿಗಳು ತಮ್ಮಕಚೇರಿಯ ಕೊಠಡಿಗೆ ಬೀಗ ಹಾಕಿ ಒಳಗಡೆ ಕಾರ್ಯ ನಿರ್ವಹಿಸುವ ಮೂಲಕ ಕಡತಗಳನ್ನು ವಿಲೇವಾರಿ ಮಾಡುವಲ್ಲಿ ನಿರತರಾಗಿರುವುದು ಬೆಳಕಿಗೆ ಬಂದಿದ್ದು, ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.  
 
ಈ ಕಾರ್ಯವು ಬಿಡಿಎ ಪ್ರಧಾನ ಕಚೇರಿಯ ಒಂದನೇ ಮಹಡಿಯ ಸ್ಕ್ಯಾನಿಂಗ್ ಕೊಠಡಿಯಲ್ಲಿ ನಡೆಯುತ್ತಿದ್ದು, ಬಿಡಿಎಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಇಲ್ಲಿ ವಿಲೇವಾರಿ ಮಾಡಲಾಗುತ್ತದೆ. ಈ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಅಕ್ರಮವಾಗಿ ಸರ್ಕಾರದ ಮುದ್ರೆ ಹಾಗೂ ಕ್ರಮ ಸಂಖ್ಯೆಗಳನ್ನು ಬದಲಿಸುತ್ತಿದ್ದುದು ಕಂಡು ಬಂದಿದೆ. ಅಧಿಕಾರಿಗಳ ಈ ಎಲ್ಲಾ ಚಟುವಟಿಕೆಗಳು ಮಾಧ್ಯಮಗಳಲ್ಲಿ ಸೆರೆಯಾಗಿದ್ದು, ಹಲವು ಅನುಮಾನಗಳನ್ನು ಮೂಡಿಸುತ್ತಿವೆ. ಇದರ ಜೊತೆಗೆ ಕೊಠಡಿಗೆ ಬೀಗ ಹಾಕಿಕೊಂಡು ಕೆಲಸ ಮಾಡುತ್ತಿದ್ದರೂ ಕೂಡ ಒರ್ವ ಪೊಲೀಸ್ ಪೇದೆಯನ್ನು ಭದ್ರತೆಗಾಗಿ ನಿಯೋಜಿಸಿಕೊಂಡಿದ್ದಾರೆ.  
 
ಇತ್ತೀಚೆಗೆ ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ವಾದ ವಿವಾದಗಳ ಜಟಾಪಟಿ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕಾಣದ ಕೆಲ ಪ್ರಭಾವಿ ವ್ಯಕ್ತಿಗಳು ಈ ಕಾರ್ಯವನ್ನು ತ್ವರಿತವಾಗಿ ಮುಗಿಸುವಂತೆ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಗುಸುಗುಸು ಸುದ್ದಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. 

ವೆಬ್ದುನಿಯಾವನ್ನು ಓದಿ