ರಸ್ತೆಯಲ್ಲೇ ಅಸಹಾಯಕ ಮಹಿಳೆಗೆ ಹೆರಿಗೆ ಮಾಡಿಸಿದ ಭಿಕ್ಷುಕಿ!

ಸೋಮವಾರ, 13 ಮಾರ್ಚ್ 2017 (11:16 IST)
ರಾಯಚೂರು: ಆಕೆಗೆ ರಸ್ತೆ ಮಧ್ಯೆ ಹೆರಿಗೆ ನೋವು ಕಾಣಿಸಿಕೊಂಡಿತು. ಸಹಾಯಕ್ಕೆ ಯಾರೊಬ್ಬರೂ ಜತೆಯಲ್ಲಿರಲಿಲ್ಲ. ಆಸ್ಪತ್ರೆಗೆ ಹೋಗುವಷ್ಟು ವ್ಯವಧಾನವಿರಲಿಲ್ಲ. ಆದರೂ ಸುರಕ್ಷಿತವಾಗಿ ಹೆಣ್ಣು ಮಗುವೊಂದಕ್ಕೆ ಜನ್ಮವಿತ್ತಳು. ಇದಕ್ಕೆಲ್ಲಾ ಕಾರಣ ಓರ್ವ ಭಿಕ್ಷುಕ ಮಹಿಳೆ.

 
ಇದು ನಡೆದಿರುವುದು ರಾಯಚೂರು ಮಾನ್ವಿಯಲ್ಲಿ. ಯೆಲ್ಲಮ್ಮ (30) ಎಂಬ ಮಹಿಳೆ ರಸ್ತೆ ಮಧ್ಯೆ ಮಗುವಿಗೆ ಜನ್ಮವಿತ್ತ ಮಹಿಳೆ. ಆಕೆಗೆ ಸಹಾಯ ಮಾಡಿದ್ದು 60 ವರ್ಷ ಸುಮಾರಿನ ಭಿಕ್ಷುಕ ಮಹಿಳೆ.

ಎಲ್ಲರೂ ನೋಡುತ್ತಿದ್ದರೆ, ಪಕ್ಕದಲ್ಲಿದ್ದ ಭಿಕ್ಷುಕ ಮಹಿಳೆ ಯೆಲ್ಲಮ್ಮನ ಹೆರಿಗೆ ಮಾಡಿಸಿಯೇ ಬಿಟ್ಟಳು. ಇದೀಗ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ಕೃಷಿಕ ಕುಟುಂಬದವರಾದ ಯೆಲ್ಲಮ್ಮನಿಗೆ ಈಗಾಗಲೇ ಮೂವರು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಗು ಹಡೆಯುವ ಆಸೆಯಿದ್ದ ಯೆಲ್ಲಮ್ಮನಿಗೆ ಈ ಬಾರಿ ಅದು ಈಡೇರಿದೆ.

ಬಸ್ ನಿಂದಿಳಿದ ಯೆಲ್ಲಮ್ಮ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ರಕ್ತ ಸ್ರಾವವಾಗುತ್ತಿರುವುದನ್ನು ನೋಡಿ ಪತಿ ರಾಮಣ್ಣನಿಗೆ ದಿಕ್ಕೇ ತೋಚಲಿಲ್ಲವಂತೆ. ಈ ಸಂದರ್ಭದಲ್ಲಿ ಸಮಯ ಪ್ರಜ್ಞೆ ತೋರಿದ ಭಿಕ್ಷುಕಿ ಇತರ ಮಹಿಳೆಯರನ್ನು ನಿಲ್ಲಿಸಿ ಹೆರಿಗೆ ಮಾಡಿಸಿಯೇ ಬಿಟ್ಟಳು ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ