ಬೆಳಗಾಂಗೆ ಬೆಳಗಾವಿಯಾಗಿ ನಾಮಕರಣ ವಿರುದ್ಧ ಎಂಇಎಸ್ ಪ್ರತಿಭಟನೆ

ಶನಿವಾರ, 1 ನವೆಂಬರ್ 2014 (11:40 IST)
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸುತ್ತಿರುವ ನಡುವೆ, ಕರ್ನಾಟಕದಿಂದ ಪ್ರತ್ಯೇಕತೆಯ ಕೂಗನ್ನು ಎಬ್ಬಿಸಿರುವ ಬೆಳಗಾವಿಯ ಎಂಇಎಸ್ ಮತ್ತು ಕೊಡಗಿನ ಕೊಡವ ಸಮಾಜ ಮುಖಂಡರು ಇಂದು ಪ್ರತಿಭಟನೆ ನಡೆಸಿದರು. 
 
ಬೆಳಗಾಂಅನ್ನು ಬೆಳಗಾವಿ ಎಂದು ನಾಮಕರಣ ಮಾಡಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಶಾಸಕ ಸಂಭಾಜಿ ಪಾಟೀಲ್ ನೇತೃತ್ವದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ವ್ಯಕ್ತಪಡಿಸಿದರು ಮತ್ತು ಕಪ್ಪು ಬಟ್ಟೆ ಧರಿಸಿ ಬೈಕ್ ರ‌್ಯಾಲಿ ನಡೆಸಿದರು. ಬೆಳಗಾವಿಯ ಶಿವಾಜಿಗಾರ್ಡನ್‌ನಿಂದ ಮೆರವಣಿಗೆ ಆರಂಭಿಸುವ ಮೂಲಕ ಕರಾಳ ದಿನಾಚರಣೆಯನ್ನು ಆರಂಭಿಸಿದರು. 12 ಗಂಟೆಗೆ ಎಂಇಎಸ್ ಮರಾಠ ಮಂದಿರದಲ್ಲಿ ಸಭೆ ಸೇರಲಿದ್ದಾರೆ. 
 
ಏತನ್ಮಧ್ಯೆ ಕೊಡಗನ್ನು ಕೇಂದ್ರಾಡಳಿತ ರಾಜ್ಯವನ್ನಾಗಿ ಮಾಡಬೇಕೆಂದು ಕೊಡವ ಸಮಾಜದ ಮುಖಂಡರು ಪ್ರತಿಭಟನೆ ಮಾಡಿದರು. ಕೊಡವ ಸಂಪ್ರದಾಯ ಉಡುಗೆ ತೊಟ್ಟು ದೆಹಲಿಯ ಜಂತರ್‌ಮಂತರ್‌ನಲ್ಲಿ ಕೊಡವ ಸಮಾಜ ಪ್ರತಿಭಟನೆ ನಡೆಸಿತು. ಕೊಡಗನ್ನು ಸಂಪೂರ್ಣವಾಗಿ ಕರ್ನಾಟಕ ರಾಜ್ಯ ನಿರ್ಲಕ್ಷಿಸಿದ್ದು, ಈ ಹಿನ್ನೆಲೆಯಲ್ಲಿ ಕೊಡಗನ್ನು ಪ್ರತ್ಯೇಕವಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕರ್ನಾಟಕ ನಮ್ಮಿಂದ ಹೆಚ್ಚಿನ ಸಂಪನ್ಮೂಲ ಪಡೆದುಕೊಂಡು ನಮ್ಮ ಅಭಿವೃದ್ಧಿಗೆ ಗಮನಹರಿಸುತ್ತಿಲ್ಲ ಎಂದು ಕೊಡವ ಸಮಾಜ ದೂರಿದೆ. 
 
ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂದು ಆಗ್ರಹಿಸಿ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಉತ್ತರಕರ್ನಾಟಕದ 13 ಜಿಲ್ಲೆಗಳನ್ನು ಸೇರಿಸಿಕೊಂಡು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು. 13 ಜಿಲ್ಲೆಗಳ ಒಂದು ನಕ್ಷೆಯನ್ನು ಕೂಡ ತಯಾರುಮಾಡಿ ಧ್ವಜಾರೋಹಣ ಮಾಡಿದರು.

ವೆಬ್ದುನಿಯಾವನ್ನು ಓದಿ