ಕಾರ್ಖಾನೆ ವಲಯದಲ್ಲಿ ಸ್ಥಳೀಯರಿಗೆ ಆಧ್ಯತೆ ನೀಡಿ: ಸಚಿವ ಸಂತೋಷ್ ಲಾಡ್

ಶುಕ್ರವಾರ, 12 ಆಗಸ್ಟ್ 2016 (09:08 IST)
ಕಾರ್ಖಾನೆಗಳ ಉದ್ಯೋಗಗಳಲ್ಲಿ ಬೇರೆ ರಾಜ್ಯಗಳ ಜನರಿಗೆ ಪ್ರಾಶಸ್ಥ್ಯ ನೀಡುವುದನ್ನು ಬಿಟ್ಟು ಸ್ಥಳೀಯ ಜನರು ಹಾಗೂ ಕನ್ನಡಿಗರಿಗೆ ಆಧ್ಯತೆ ನೀಡಬೇಕಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಉದ್ಯಮಿಗಳಿಗೆ ಸೂಚನೆ ನೀಡಿದ್ದಾರೆ.
 
ಬಳ್ಳಾರಿ ನಗರದಲ್ಲಿ ನಡೆದ ಉದ್ಯಮಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಂಡವಾಳ ಹೂಡಿಕೆಗೆ ರಾಜ್ಯ ಸೂಕ್ತ ಸ್ಥಳವಾಗಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡುವಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.
 
ಬಳ್ಳಾರಿ ಜಿಲ್ಲೆ ಕೂಡ ಕೈಗಾರಿಕೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದು, ಗಣಿ, ಸ್ಟೀಲ್, ರೆಡಿಮೆಡ್ ಬಟ್ಟೆ, ಜಿನ್ಸ್ ಉದ್ಯಮ ಮತ್ತು ಇತರೆ ವಲಯಗಳಲ್ಲಿ ಹೆಸರುವಾಸಿಯಾಗಿದೆ. ಜಿಲ್ಲೆಯಲ್ಲಿ ಕೈಗಾರಿಕೆಗಳ ಬೆಳವಣಿಗೆ ಹಾಗೂ ಕಾರ್ಖಾನೆಗಳ ಸ್ಥಾಪನೆಗೆ ಅಗತ್ಯವಾದ ಎಲ್ಲ ಸಹಾಯವನ್ನು ರಾಜ್ಯ ಸರಕಾರ ನೀಡಲಿದೆ ಎಂದು ಹೇಳಿದರು.
 
ಸಭೆಯಲ್ಲಿ ಪಾಲ್ಗೊಂಡಿದ್ದ ಉದ್ಯಮಿದಾರರು ವಿದ್ಯುತ್ ಸಮಸ್ಯೆ ಸೇರಿದಂತೆ ರಸ್ತೆ, ಕುಡಿಯುವ ನೀರು, ಪರವಾನಿಗೆ ನೀಡುವಲ್ಲಿ ವಿಳಂಬ ನೀತಿ ಎಂಬ ಆಕ್ಷೇಪಗಳನ್ನು ಪ್ರಸ್ತಾಪಿಸಿದ್ದು, ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಸಚಿವ ಬಳಿ ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ