ಎತ್ತಿನ ಹೊಳೆ ಯೋಜನೆ ವಿರೋಧಿಸಿ ಬೆಳ್ತಂಗಡಿ ಬಂದ್, ಯಶಸ್ವಿ

ಬುಧವಾರ, 7 ಅಕ್ಟೋಬರ್ 2015 (14:47 IST)
ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನಗರದಲ್ಲಿ ಕರೆ ನೀಡಲಾಗಿದ್ದ ಬಂದ್ ಯಶಸ್ವಿಗೊಂಡಿದ್ದು, ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚುವ ಮೂಲಕ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.  
 
ನಗರದ ನೇತ್ರಾವತಿ ಉಳಿಸಿ ಹೋರಾಟ ಸಮಿತಿಯು ಈ ಬಂದ್‌ಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದಿನ ಬಂದ್‌ಗೆ 43ಕ್ಕೂ ಅಧಿಕ ಸಂಘಟನೆಗಳು ಸಾಥ್ ನೀಡಿದ್ದು, ಯಾತ್ರಾ ಸ್ಥಳವಾಗಿರುವ ಧರ್ಮಸ್ಥಳಕ್ಕೂ ಕೂಡ ಬಂದ್ ಬಿಸಿ ತಟ್ಟಿದೆ. ಬಂದ್ ಹಿನ್ನೆಲೆಯಲ್ಲಿ ಉದ್ರಿಕ್ತಗೊಂಡ ಪ್ರತಿಭಟನಾಕಾರರು ಇಲ್ಲಿನ ಸಂತೆಕಟ್ಟೆಯಲ್ಲಿ ಬೈಕ್‌ವೊಂದಕ್ಕೆ ಬೆಂಕಿ ಹಚ್ಚಿ ನೇತ್ರಾವತಿ ತಿರುವು ಮಾಡಲು ನಾವು ಬಿಡೆವು ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 
 
ಇನ್ನು ಇಲ್ಲಿ ಹರಿಯುವ ನೇತ್ರಾವತಿ ನದಿಯನ್ನು ತಿರುಗಿಸಿ ಬಯಲುಸೀಮೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ನೀರನ್ನು ಒದಗಿಸುವ ಸಲುವಾಗಿ ಸರ್ಕಾರ ಈ ಎತ್ತಿನ ಹೊಳೆ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಈ ಯೋಜನೆ ಜಾರಿಯಾದಲ್ಲಿ ನೇತ್ರಾವತಿ ನದಿ ನೀರಿನಲ್ಲಿ ಜಿಲ್ಲೆಯ ಜನತೆಗೆ ಮೋಸವಾಗುತ್ತದೆ. ಅಲ್ಲದೆ ಈ ಯೋಜನೆಯಿಂದ ಸಾಕಷ್ಟು ಪ್ರಾಣಿ, ಪಕ್ಷಿಗಳ ಸಂಕುಲಕ್ಕೆ ಧಕ್ಕೆ ಉಂಟಾಗುತ್ತದೆ. ಹಾಗಾಗಿ ನಾವು ಈ ಯೋಜನೆ ಜಾರಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂಬುದು ಪ್ರತಿಭಟನಾಕಾರರ ನಿಲುವಾಗಿದೆ. 

ವೆಬ್ದುನಿಯಾವನ್ನು ಓದಿ