ಬೆಂಗಳೂರಿನಲ್ಲಿ ಗ್ಯಾಂಗ್ ರೇಪ್: ಇಲ್ಲಿದೆ ಸಂಪೂರ್ಣ ವಿವರ

ಮಂಗಳವಾರ, 6 ಅಕ್ಟೋಬರ್ 2015 (15:57 IST)
ಟಿಟಿ ವಾಹನದಲ್ಲಿ ಯುವತಿಯೋರ್ವಳ ಮೇಲೆ ಎಸಗಲಾಗಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಟಿವಿ ದೃಶ್ಯಾವಳಿ ಹಾಗೂ ಎಫ್ಎಸ್ಎಲ್ ವರದಿಯನ್ನಾಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮಾಧ್ಯಮಗಳಿಗೆ ಘಟನೆಯ ಸಂಪೂರ್ಣ ವಿವರವನ್ನು ನೀಡಿದ್ದಾರೆ. 
 
ಘಟನೆ ವಿವಿರ: ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಬಿಪಿಒ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂತ್ರಸ್ತ ಯುವತಿ, ತಂಗಿದ್ದ ಮಡಿವಾಳದ ಪಿಜಿಯಿಂದ ಸಂಜೆ 4 ಗಂಟೆಗೆ ಸರ್ಕಾರಿ ಬಸ್‌ನಲ್ಲಿ ಆಗಮಿಸಿ ಎಲೆಕ್ಟ್ರಾನಿಕ್ ಸಿಟಿ ಬಸ್ ನಿಲ್ದಾಣದಲ್ಲಿ ಇಳಿದಿದ್ದಳು. ಸಂಜೆ 5.30ಕ್ಕೆ ಕಚೇರಿ ತಲುಪಿದ ಆಕೆ ರಾತ್ರಿ 9.30ರ ವರೆಗೆ ಕೆಲಸ ನಿರ್ವಹಿಸಿದ್ದಳು. ತರವಾಯ ಸ್ನೇಹಿತೆಯರೊಂದಿಗೆ ವಾಪಾಸ್ ಬಂದು ಎಲೆಕ್ಟ್ರಾನಿಕ್ ಸಿಟಿ ಬಸ್ ನಿಲ್ದಾಣದಲ್ಲಿ ಮಡಿವಾಳಕ್ಕೆ ವಾಪಾಸಾಗಲು ಕಾಯುತ್ತಿದ್ದಳು. ಆದರೆ ಎಷ್ಟೇ ಹೊತ್ತು ಕಾದಿದ್ದರೂ ಕೂಡ ಸರ್ಕಾರಿ ಬಸ್ ಬರಲಿಲ್ಲ. ಬಳಿಕ 9.55ಕ್ಕೆ ಟಿಟಿ ವಾಹನವೊಂದು ಬಂದಿದೆ. ಈ ವಾಹನವನ್ನು ಏರಿದ ಯುವತಿಗೆ 5 ಮಂದಿ ಪ್ರಯಾಣಿಕರಿರುವುದು ಕಂಡು ಬಂದಿದೆ. ಆದರೆ ಮಡಿವಾಳಕ್ಕೂ ಮುನ್ನವೇ ಅಲ್ಲಲ್ಲಿ ಇದ್ದ ಐದೂ ಮಂದಿ ಪ್ರಯಾಣಿಕರು ಕೆಳಗಿಳಿದಿದ್ದಾರೆ. ಬಳಿಕ ಒಬ್ಬಂಟಿಯಾದ ಈಕೆ, ವಾಹನದ ಹಿಂದಿನ ಸೀಟಿಗೆ ತೆರಳಿ ಕುಳಿತಿದ್ದಾಳೆ. 
 
ಟಿಟಿ ವಾಹನವು ಶಾಲಾ ಮಕ್ಕಳ ವಾಹನವಾಗಿದ್ದರಿಂದ ವಾಹನದಲ್ಲಿ ಸೀಟುಗಳ ಬದಲಿಗೆ ಬೆಂಚ್ ಅಳವಡಿಸಲಾಗಿತ್ತು. ಈ ವೇಳೆ ಕನ್ನಡದಲ್ಲಿಯೇ ಮಾತನಾಡುತ್ತಿದ್ದ ಟಿಟಿ ಚಾಲಕ ಮತ್ತು ಕ್ಲೀನರ್ ಯುವತಿ ಓರ್ವಳೇ ಇದ್ದುದನ್ನು ಕಂಡಿದ್ದಾರೆ. ಅಲ್ಲದೆ ಚಾಲಕ ಮಡಿವಾಳಕ್ಕೆ ತೆರಳದೆ ಅಂಡರ್ ಪಾಸ್‌ನಲ್ಲಿ ಚಲಿಸಲು ಶುರು ಮಾಡಿದ್ದಾನೆ. ಇದರಿಂದ ಗಾಬರಿಯಾದ ಯುವತಿ ಚಾಲಕನನ್ನು ರಸ್ತೆ ಬದಲಿಸಿದ ಬಗ್ಗೆ ಪ್ರಶ್ನಿಸಿದ್ದಾಳೆ. ಆಗ ಅಕಸ್ಮಾತಾಗಿ ರಸ್ತೆ ತಪ್ಪಿತು. ಹಾಗಾಗಿ ರಸ್ತೆ ಬದಲಿಸಿದೆ ಎಂಬುದಾಗಿ ಸಮಜಾಯಿಷಿ ನೀಡಿ ಮತ್ತೆ ಯೂ ಟರ್ನ್ ತೆಗೆದುಕೊಂಡಿದ್ದಾನೆ. ಬಳಿಕ ಚಾಲಕ ವಾಹನದಲ್ಲಿ ಜೋರಾಗಿ ಮ್ಯೂಸಿಕ್ ಹಾಕಿದ್ದಾನೆ. ತರುವಾಯ ಕ್ಲೀನರ್ ಕಬ್ಬಿಣದ ರಾಡ್‌ನಿಂದ ಬೆದರಿಸಿ ಬಟ್ಟೆ ಬಿಚ್ಚಲು ಸೂಚಿಸಿದ್ದಾನೆ. ಆ ವೇಳೆಗೆ ಮಡಿವಾಳ ತಲುಪಿ ಆಗಿತ್ತು. ಆದರೆ ಮತ್ತೆ ಹೆಚ್ಎಸ್‌ಆರ್ ಲೇಔಟ್ ಕಡೆಗೆ ವಾಹನ ಚಲಾಯಿಸಿ ಚಾಲಕ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದಾನೆ. 
 
ಬಳಿಕ ಕ್ಲೀನರ್ ಬಟ್ಟೆ ಬಿಚ್ಚಲು ಹೇಳಿ ಅತ್ಯಾಚಾರ ನಡೆಸಿದ್ದಾನೆ. ಅನಂತರ ಚಾಲಕನೂ ಕೂಡ ಅತ್ಯಾಚಾರ ಮಾಡಲು ಮುಂದಾಗಿದ್ದಾನೆ. ಹೀಗೆ 3 ಗಂಟೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಮುಗಿದ ಬಳಿಕ ಯುವತಿಯಿಂದ ಮೊಬೈಲ್ ಕಸಿದುಕೊಂಡು ಬೆದರಿಕೆ ಹಾಕಿದ್ದಾರೆ. ಬಳಿಕ ಮತ್ತೆ ಮಡಿವಾಳ ಕಡೆಗೆ ಪಯಣ ಬೆಳೆಸಿ 45 ನಿಮಿಷಗಳ ಕಾಲ ಅಲ್ಲಿಯೇ ವಾಹನ ಚಲಾಯಿಸಲಾಗಿದೆ. ಕೊನೆಗೆ ಮಡಿವಾಳದ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿ ಮಧ್ಯರಾತ್ರಿ ಸರಿಸುಮಾರು 2.30ರ ವೇಳೆಯಲ್ಲಿ  ಯುವತಿಯನ್ನು ಇಳಿಸಿ ಪರಾರಿಯಾಗಿದ್ದಾರೆ. 
 
ಬಳಿಕ ಸ್ಥಳೀಯರ ಸಹಾಯದಿಂದ ಸ್ನೇಹಿತರಿಗೆ ದೂರವಾಣಿ ಕರೆ ಮಾಡಿದ ಯುವತಿ ಸ್ನೇಹಿತರನ್ನು ಸಂಪರ್ಕಿಸಿದ್ದಾಳೆ. ಅಲ್ಲದೆ ನಗರದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ವೈದ್ಯರಿಗೆ ಅತ್ಯಾಚಾರವಾದ ಬಗ್ಗೆ ಮಾಹಿತಿ ನೀಡಿದ್ದಾಳೆ. ಇದೇ ಮಾಹಿತಿಯನ್ನು ಆಸ್ಪತ್ರೆಯ ಸಿಬ್ಬಂದಿ ಮಡಿವಾಳ ಪೊಲೀಸರಿಗೆ ತಿಳಿಸಿದ್ದಾರೆ.  
 
ಮಾಹಿತಿ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಗ್ಗೆ ಆಸ್ಪತ್ರೆಗೆ ಆಗಮಿಸಿದ ನಗರದ ಡಿಸಿಪಿ ರೋಹಿಣಿ ಕಟೋಚ್‌ ಮತ್ತು ತಂಡ ಯೂವತಿಯಿಂದ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಈ ವೇಳೆ ಯುವತಿ ಟಿಟಿ ನಂಬರ್ ನೀಡಿದ್ದಾಳೆ. ನಂಬರ್ ಹಾಗೂ ಯುವತಿಯ ಹೇಳಿಕೆಗಳ ಆಧಾರದ ಮೇಲೆ ದೂರು ದಾಖಲಿಸಿಕೊಂಡ ಪೊಲೀಸರು, ತನಿಖೆ ಚುರುಕು ಗೊಳಿಸಿದ್ದರು. ಬಳಿಕ ಯುವತಿಯನ್ನು ಜಡ್ಜ್ ಎದುರು ಹಾಜಪಡಿಸಲಾಗಿ ಯುವತಿ ನಡೆದ ಎಲ್ಲಾ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾಳೆ. 
 
ತನಿಖೆ ಮುಂದುವರಿಸಿದ್ದ ಪೊಲೀಸರು, ಚಿತ್ರಕಲಾ ಪರಿಷತ್‌ನ ಕಲಾವಿದರನ್ನು ಕರೆಸಿ ಯುವತಿ ಹೇಳಿಕೆಯ ಆಧಾರದ ಮೇಲೆ ಆರೋಪಿಗಳ ರೇಖಾ ಚಿತ್ರವನ್ನೂ ಸಿದ್ಧಪಡಿಸಿದರು. ಅಲ್ಲದೆ ದೊಮ್ಮಲೂರು ಸಿಗ್ನಲ್‌ನಲ್ಲಿ ಅಲವಡಿಸಲಾಗಿದ್ದ ಸಿಸಿಟಿವಿಗಳ ದೃಶ್ಯಾವಳಿಗಳನ್ನಾಧರಿಸಿ ವಾಹನವನ್ನು ಜಪ್ತಿ ಮಾಡಿದ್ದರು. ಪ್ರಸ್ತುತ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 
 
ಪೊಲೀಸರ ಮಾಹಿತಿ ಪ್ರಕಾರ, ವಾಹನವು ನಗರದ ಬ್ಯಾಟರಾಯನಪುರದ ಕವಿಕಾ ಲೇಔಟ್ ನಿವಾಸಿ ಶಂಕರ್ ಎಂಬಾತನಿಗೆ ಸೇರಿದ್ದಾಗಿದ್ದು, ಈತನಿಂದ ಇತರೆ ಇಬ್ಬರಿಗೆ ಮಾರಾಟವಾಗಿರುವ ಮಾಹಿತಿ ಇದೆ. ಹಾಗಾಗಿ ಅಧಿಕೃತ ಮಾಲೀಕರನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚಲಿದ್ದೇವೆ ಎಂದಿದ್ದಾರೆ. 
 
ಟಿಟಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ ಪೊಲೀಸರು, ಈಗಾಗಲೇ ಎಫ್ಎಸ್ಎಲ್ ವರದಿಯನ್ನೂ ಕೂಡ ಪಡೆದಿದ್ದಾರೆ. ಇದರಿಂದ ಅತ್ಯಾಚಾರ ನಡೆದಿದೆ ಎಂದು ದೃಢಪಟ್ಟಿದೆ. 
 
ಈ ಘಟನೆಯು ಅ.3ರ ಶನಿವಾರ ರಾತ್ರಿ ನಡೆದಿದ್ದು, ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಮಧ್ಯ ಪ್ರದೇಶದ ಗ್ವಾಲಿಯರ್ ಮೂಲದವಳಾಗಿದ್ದಾಳೆ. ಅತ್ಯಾಚಾರಕ್ಕೆ ಬಳಸಲಾಗಿದ್ದ ಟಿಟಿ ವಾಹನದ ಸಂಖ್ಯೆ ಕೆಎ 03, ಬಿ 1863 ಆಗಿದೆ. 

ವೆಬ್ದುನಿಯಾವನ್ನು ಓದಿ