30 ರೂಪಾಯಿ ಹೆಚ್ಚುವರಿ ಪಾವತಿಸಲು ನಿರಾಕರಣೆ: ಯುವತಿಯನ್ನು ಥಳಿಸಿದ ರಿಕ್ಷಾ ಚಾಲಕ

ಶುಕ್ರವಾರ, 10 ಏಪ್ರಿಲ್ 2015 (16:59 IST)
ಹೆಚ್ಚುವರಿಯಾಗಿ 30 ರೂಪಾಯಿ ನೀಡಲು ನಿರಾಕರಿಸಿದ ಯುವತಿಯೊಬ್ಬಳ ಮೇಲೆ ರಿಕ್ಷಾ ಚಾಲಕನೊಬ್ಬ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಈ ಕುರಿತು ಆಕೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಸಹಾಯ ಯಾಚಿಸಿದಾಗ ಪ್ರತಿಕ್ರಿಯಿಸಿದ ಪೊಲೀಸ್ ಸಿಬ್ಬಂದಿ ನೀವು ಇಲ್ಲಿಗೆ ಬಂದು ದೂರು ನೀಡಿ, ನಾವು ಅಲ್ಲಿಗೆ ಬರಲಾಗದು ಎಂದು ಹೇಳಿ ಕೈ ತೊಳೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 
 
ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಯುವತಿಯ ಮೇಲೆ ಆಟೋ ಚಾಲಕ ರಿಜ್ವಾನ್ ಬಾಷಾ ನಾಲ್ಕು ಬಾರಿ ಹಲ್ಲೆ ನಡೆಸಿದರೂ  ಹತ್ತಿರವಿದ್ದವರು ನೋಡುತ್ತಿದ್ದರೇ ವಿನಹಃ ರಕ್ಷಣೆಗೆ ಬರಲಿಲ್ಲ. 
 
ಫೇಸ್‌ಬುಕ್‌ನಲ್ಲಿ  ಆಕೆ ಈ ಕುರಿತು ಬರೆದಿದ್ದು, "ನಾನು ಮೀಟರ್‌ ಲೆಕ್ಕಾಚಾರದಲ್ಲಿ ಹಣ ಪಾವತಿಸುವುದಾಗಿ ಆಟೋವನ್ನು ಬಾಡಿಗೆಗೆ ಹಿಡಿದಿದ್ದೆ. ಆದರೆ ತಲುಪಬೇಕಾದ ಜಾಗ ಬರುವ ಮುನ್ನವೇ ಆತ 30 ರೂಪಾಯಿ ಹೆಚ್ಚು ನೀಡುವಂತೆ ಕ್ಯಾತೆ ತೆಗೆದಿದ್ದಾನೆ. ನಾನದನ್ನು ವಿರೋಧಿಸಿದಾಗ ಕೋಪಗೊಂಡ ಆತ ಕೆಳಗಿಳಿ ಎಂದು ಕಿರುಚಿದ್ದಾನೆ. ಈ ಕುರಿತು ಹತ್ತಿರದಲ್ಲಿರುವ  ಆಟೋರಿಕ್ಷಾ ಚಾಲಕರ ಬಳಿ ದೂರುವುದಾಗಿ ನಾನು ತಿಳಿಸಿದಾಗ ಕಟುವಾಗಿ ನಿಂದಿಸಿದ ಆತ ಆಟೋ ನಿಲ್ಲಿಸಿ ನನ್ನನ್ನು ಹೊರಗೆಳೆಯಲು ಪ್ರಯತ್ನಿಸಿದ್ದಾನೆ", ಎಂದು ತಿಳಿಸಿದ್ದಾಳೆ. 
 
ಆಗ ಆಕೆ ಪೊಲೀಸ್ ಸಹಾಯವಾಣಿಗೆ ಕರೆ ನೀಡಿದ್ದಾಳೆ. ಆದರೆ ಪೊಲೀಸ್ ಸಿಬ್ಬಂದಿ ಆಕೆಯ ಯಾಚನೆಯನ್ನು ನಿರ್ಲಕ್ಷಿಸಿದ್ದಾನೆ. ಆಕೆ ಕರೆ ಕಟ್ ಮಾಡಿದ ತಕ್ಷಣ ಆಟೋ ಚಾಲಕ ಆಕೆಯ ಮೇಲೆ ಹಲ್ಲೆ ನಡೆಸಲು ಪ್ರಾರಂಭಿಸಿದ್ದಾನೆ. ಅಕ್ಕಪಕ್ಕದವರು ಆಕೆಯ ದಯನೀಯ ಸ್ಥಿತಿಯನ್ನು ನೋಡುತ್ತ ನಿಂತಿದ್ದರು ವಿನಃ ಯಾರು ಕೂಡ ಸಹಾಯಕ್ಕೆ ಬರಲಿಲ್ಲ ಎಂದು ಯುವತಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾಳೆ. 

ವೆಬ್ದುನಿಯಾವನ್ನು ಓದಿ