ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ಪರೀಕ್ಷೆ ಮುಂದೂಡಿದ ಬೆಂ. ವಿವಿ

ಮಂಗಳವಾರ, 5 ಮೇ 2015 (09:39 IST)
ಸಾಮಾಜಿಕ ಜಾಲತಾಣ ವಾಟ್ಸ್‌ಅಪ್ ಮೂಲಕ ವಿವಿಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಬಿ.ಕಾಂ ಪದವಿಯ 6ನೇ ಸೆಮಿಸ್ಟರ್‌ನ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅವರು ಖಚಿತಪಡಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ನಡೆಯಬೇಕಿದ್ದ ತರಿಗೆ ಹಾಗೂ ಸಂಖ್ಯಾಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ 16 ಅಂಕದ ಒಂದು ಪ್ರಶ್ನೆ ಹಾಗೂ 8 ಅಂಕದ ಎರಡು ಪ್ರಶ್ನೆಗಳು ನಿನ್ನೆ ವಾಟ್ಸ್‌ಅಪ್ ಮೂಲಕ ಸೋರಿಕೆಯಾಗಿವೆ. ಈ ವಿಷಯ ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ. ಆದರೆ ಇಂದಿನ ಪರೀಕ್ಷೆಯಲ್ಲಿ ಮರುಪರೀಕ್ಷೆಗೆ ಹಾಜರಾಗಬೇಕಿದ್ದ ಮರುಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಬರೆಯಲಿದ್ದಾರೆ ಎಂದರು. 
 
ಇದೇ ವೇಳೆ, ಬಿ.ಕಾಂ ಪದವಿಯ 6ನೇ ಸೆಮಿಸ್ಟರ್‌ನ ಎಲ್ಲಾ ವಿಷಯಗಳ ಪರೀಕ್ಷೆ ಹಾಗೂ ವಿವಿಯಲ್ಲಿ ಮೇ 7 ಮತ್ತು 9ರಂದು ನಡೆಯಬೇಕಿದ್ದ ವಿಷಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಸ್ಪಷ್ಟಪಡಿಸಿದರು. 
 
ಇಂದು ನಡೆಯಬೇಕಿದ್ದ ತೆರಿಗೆ ಹಾಗೂ ಸಂಖ್ಯಾಶಾಸ್ತ್ರ ವಿಷಯಗಳ ಪ್ರಶ್ನೆಗಳು ವಾಟ್ಸ್‌ಅಪ್‌ನಲ್ಲಿ ನಿನ್ನೆ ಸಂಜೆ ಸೋರಿಕೆಯಾಗಿದ್ದವು ಎಂಬ ಕಾರಣದಿಂದ ವಿವಿ ಈ ನಿರ್ಧಾರ ಕೈಗೊಂಡಿದೆ. ಮುಂದೆ ನಡೆಸಲಿರುವ ಪರೀಕ್ಷಾ ವೇಳಾಪಟ್ಟಿಯನ್ನು ವಿವಿ ಇಂದು ಸಂಜೆ ಪ್ರಕಟಿಸುವ ಸಾಧ್ಯತೆ ಇದೆ. ಪರೀಕ್ಷೆಯು ಇಂದು ಮಧ್ಯಾಹ್ನ ಪರೀಕ್ಷೆ ನಡೆಯಬೇಕಿತ್ತು. 

ವೆಬ್ದುನಿಯಾವನ್ನು ಓದಿ