ಒಂದು ತಿಂಗಳ ಕಡ್ಡಾಯ ರಜೆಯಲ್ಲಿ ಭಾಸ್ಕರ್ ರಾವ್

ಮಂಗಳವಾರ, 7 ಜುಲೈ 2015 (10:33 IST)
ಲೋಕಾಯುಕ್ತ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಆರೋಪ ಕೇಳು ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ವಜೂಭಾಯ್‌ ವಾಲಾ ಅವರ ಸೂಚನೆ ಮೇರೆಗೆ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರು ಒಂದು ತಿಂಗಳ ಕಡ್ಡಾಯ ರಜೆ ಹಾಕಿದ್ದಾರೆ.
 
ಸೋಮವಾರ ಬೆಳಗ್ಗೆ ದೂರವಾಣಿ ಮೂಲಕ ಮಾತನಾಡಿದ್ದ ರಾಜ್ಯಪಾಲರು, ಲೋಕಾಯುಕ್ತರ ಕಾರ್ಯವೈಖರಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು ಎನ್ನಲಾಗಿದ್ದು, ಸಂಜೆ ಭೇಟಿಯಾಗುವಂತೆಯೂ ಸೂಚಿಸಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿಯೇ ನಿನ್ನೆ ಸಂಜೆ ತಮ್ಮ ಕಚೇರಿ ಕೆಲಸ ಪೂರೈಸಿದ ಲೋಕಾಯುಕ್ತರು, ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಾಲಾ ಅವರನ್ನು ಭೇಟಿಯಾಗಿದ್ದರು. ಅಲ್ಲಿ ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ಅವರಿಗೆ ರಾಜ್ಯಪಾಲರು ಕಡ್ಡಾಯ ರಜೆ ಮೇಲೆ ಒಂದು ತಿಂಗಳು ತೆರಳುವಂತೆ ಸೂಚನೆ ನೀಡಿದ್ದರು ಎಂದು ತಿಳಿದು ಬಂದಿತ್ತು. 
 
ರಾಜಭವನಕ್ಕೆ ತೆರಳುವ ಮುನ್ನ ನ್ಯಾ. ಭಾಸ್ಕರ್‌ ರಾವ್‌ ಮಾಧ್ಯಮದವರಿಗೆ ತಮ್ಮ ಎರಡೂ ಕೈಗಳನ್ನು ಮೇಲೆತ್ತಿ ಮುಗಿದು ಕಚೇರಿ ಸಿಬ್ಬಂದಿಯತ್ತ ಕೈ ಬೀಸಿ ತೆರಳಿದ್ದರು. ಅವರ ಎಂದಿನಂತಿರದ ಈ ವರ್ತನೆ ಸಾರ್ವಜನಿಕರಲ್ಲಿ ಕುತೂಹಲ ಹಾಗೂ ಅನುಮಾನ ಮೂಡಿಸಿತ್ತು. ಲೋಕಾಯುಕ್ತರು ಅಂತಿಮವಾಗಿ ರಜೆ ಮೇಲೆ ತೆರಳುತ್ತಿದ್ದಾರೆ ಎಂಬುದಾಗಿ ಆಗಷ್ಟೇ ತಿಳಿದು ಬಂದಿದೆ.
 
ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರು ಸೋಮವಾರ ಸಂಜೆ ಕಚೇರಿಯಿಂದ ನಿರ್ಗಮಿಸುವ ಸಂದರ್ಭ ಕೆಲ ಕಡತವನ್ನು ಜತೆಯಲ್ಲಿ ತೆಗೆದುಕೊಂಡು ಹೋಗಿದ್ದರು. ಇದೇಕೆ ಎನ್ನುವ ಅನುಮಾನ ಕೂಡ ಕಾಡಿತ್ತು. ಆದರೆ ಅಂತಿಮವಾಗಿ ಅವರು ರಾಜಭವನಕ್ಕೆ ತೆರಳಿ ಎಲ್ಲಾ ಕಡತವನ್ನು ರಾಜ್ಯಪಾಲರಿಗೆ ಒಪ್ಪಿಸಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ. 
 

ವೆಬ್ದುನಿಯಾವನ್ನು ಓದಿ