ಲೋಕಾಯುಕ್ತ ಪದಚ್ಯುತಿಗೆ ಬಿಜೆಪಿ ಸಿದ್ಧತೆ: ಸಹಿ ಸಂಗ್ರಹ ಕಾರ್ಯಕ್ಕೆ ಚಾಲನೆ

ಮಂಗಳವಾರ, 18 ಆಗಸ್ಟ್ 2015 (17:29 IST)
ಲೋಕಾಯುಕ್ತದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ರಾಜ್ಯ ಲೋಕಾಯುಕ್ತರ ಪದಚ್ಯುತಿ ಸಂಬಂಧ ಗೊತ್ತುವಳಿ ಮಂಡಿಸಲು ಬಿಜೆಪಿ ಪಕ್ಷ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ವಿಧಾನಸೌಧದ ವಿರೋಧ ಪಕ್ಷದ ಕೊಠಡಿಯಲ್ಲಿ ಸಹಿ ಸಂಗ್ರಹಣಾ ಕಾರ್ಯಕ್ಕೆ ಚಾಲನೆ ನೀಡಿದೆ. 
 
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಸಹಿ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಇಂದು ಮೊದಲ ಬಾರಿಗೆ ವಿಧಾನಸೌಧದ ವಿರೋಧ ಪಕ್ಷ ನಾಯಕರ ಕೊಠಡಿಯಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 
 
ಈ ಸಂಬಂಧ ಪ್ರತಿಕ್ರಿಯಿಸಿದ ಜೋಶಿ, ಲೋಕಾಯುಕ್ತ ತಿದ್ದುಪಡಿ ಕಾಯಿದೆಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತರ ಪದಚ್ಯುತಿಗೆ ಮುಂದಾಗಿದ್ದು, ನಮ್ಮ ಪಕ್ಷದ ಶಾಸಕರಿಂದ ಸಹಿ ಸಂಗ್ರಹಿಸುತ್ತಿದ್ದೇವೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿ ನಮ್ಮ ಪಕ್ಷದವರೇ ಅಲ್ಲದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಂದಲೂ ಕೂಡ ಸಹಿ ಸಂಗ್ರಹಿಸಲಿದ್ದೇವೆ. ಈ ಕಾರ್ಯವು ಇನ್ನು ನಾಲ್ಕು ದಿನಗಳ ಒಳಗೆ ಮುಕ್ತಾಯವಾಗಲಿದ್ದು, ಬಳಿಕ ವರದಿಯನ್ನು ಸಭಾಪತಿ ಹಾಗೂ ಸಭಾಧ್ಯಕ್ಷರಿಗೆ ನೀಡಲಿದ್ದೇವೆ. ತರುವಾಯ ಗೊತ್ತುವಳಿ ಮಂಡನೆಗೆ ಅವಕಾಶ ಪಡೆದು ಸದನದಲ್ಲಿ ಚರ್ಚಿಸುವ ಮೂಲಕ ಅಂತಿಮವಾಗಿ ಲೋಕಾಯುಕ್ತರನ್ನು ಪದಚ್ಯುತಿಗೊಳಿಸಲಿದ್ದೇವೆ ಎಂದರು. 
 
ಇನ್ನು ಸರ್ಕಾರಿ ಅಧಿಕಾರಿಯೋರ್ವರಿಂದ ಒಂದು ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದಲ್ಲಿ ಮುಖ್ಯ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಅವರೂ ಕೂಡ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ವಿಪಕ್ಷಗಳು ಈ ನಿರ್ಧಾರಕ್ಕೆ ಮುಂದಾಗಿವೆ. 

ವೆಬ್ದುನಿಯಾವನ್ನು ಓದಿ