ಬಿಜೆಪಿ ನಾಯಕರ ಪ್ರತಿಷ್ಠೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಸಿಗಲಿಲ್ಲ

ಸೋಮವಾರ, 31 ಆಗಸ್ಟ್ 2015 (13:31 IST)
6 ಮಂದಿ ಕಾರ್ಪೊರೇಟರು‌ಗಳನ್ನು ಸೇರಿಸಿಕೊಳ್ಳಲು ಬಿಜೆಪಿ ಸಕಾರಾತ್ಮಕವಾಗಿ ಸ್ಪಂದಿಸದಿದ್ದರಿಂದ ಈಗ ತಾನಾಗಿಯೇ ಬಂದ ಭಾಗ್ಯವನ್ನು ದೂರ ಮಾಡಿಕೊಂಡಿದೆ. ಈ ಪಕ್ಷೇತರರು  ಬಿಜೆಪಿಗೆ ಬೆಂಬಲಿಸಲು ಬಯಸಿದ್ದರೂ ಕೆಲವು ನಾಯಕರ ಸ್ವಪ್ರತಿಷ್ಠೆ ಮತ್ತು ಕಿತ್ತಾಟದಿಂದಾಗಿ ಬಿಜೆಪಿಗೆ ಕೈಗೆ ಬಂದ ತುತ್ತು ಬಾಯಿಗೆ ಸಿಗದೇ ಹೋಗಿದೆ. 
 
ಮೊದಲಿಗೆ ಪಕ್ಷೇತರ ನಾಯಕರು ಬಿಜೆಪಿಗೆ ಬೆಂಬಲಿಸಲು ಆರ್.ಅಶೋಕ್ ಅವರನ್ನು ಭೇಟಿ ಮಾಡಿ ಬಿಜೆಪಿಗೆ ಬೆಂಬಲ ಸೂಚಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಬಿಜೆಪಿಯ ಇತರೆ ಕೆಲವು ಮುಖಂಡರು ಈ ಪಕ್ಷೇತರರ ವಿರುದ್ಧ ವಾಗ್ದಾಳಿ ಮಾಡಿದರೆಂದು ತಿಳಿದುಬಂದಿದೆ. ಆರ್. ಅಶೋಕ್ ಸಮ್ಮುಖದಲ್ಲೇ ಇವರು ವಾಗ್ದಾಳಿ ನಡೆಸಿದ್ದರು. ಕೋನೇನಹಳ್ಳಿ ಕಾರ್ಪೋರೇಟರ್, ಚಂದ್ರಪ್ಪ ರೆಡ್ಡಿ, ಲಕ್ಷ್ಮೀನಾರಾಯಣ,  ಎನ್. ರಮೇಶ್ ಮಾರತ್‌ಹಳ್ಳಿ ಬಿಜೆಪಿ ನಾಯಕರ ವರ್ತನೆಯಿಂದ ಬೇಸತ್ತು ಹೊರನಡೆದರೆಂದು ತಿಳಿದುಬಂದಿದೆ.

 ಚಂದ್ರಪ್ಪ ಅವರನ್ನು ಸೇರಿಸಿಕೊಳ್ಳದಂತೆ ರಘು ಆಕ್ಷೇಪ ವ್ಯಕ್ತಪಡಿಸಿದರು. ಪಿ.ಸಿ. ಮೋಹನ್ ವಿರೋಧ ಸೂಚಿಸಿದ್ದರಿಂದ ಲಕ್ಷ್ಮೀನಾರಾಯಣ ವಾಪಸಾದರು ಮತ್ತು ಎನ್. ರಮೇಶ್ ಸೇರ್ಪಡೆಗೆ ಶಾಸಕ ಅರವಿಂದ ಲಿಂಬಾವಳಿ ಆಕ್ಷೇಪ ವ್ಯಕ್ತಪಡಿಸಿದ್ದರು. ಸ್ವಪಕ್ಷೀಯರ ಪ್ರತಿಷ್ಠೆಯಿಂದ ಪಕ್ಷೇತರರಿಗೆ ಅಶೋಕ್ ಯಾವುದೇ ಆಶ್ವಾಸನೆ ನೀಡದಿದ್ದರಿಂದ ಅವರು ತೀವ್ರ ನೊಂದು ವಾಪಸಾದರೆಂದು ತಿಳಿದುಬಂದಿದೆ. ಇದಾದ ಬಳಿಕ ಅವರು ಕಾಂಗ್ರೆಸ್ ಪಾಳೆಯಕ್ಕೆ ಜಿಗಿದರೆಂದು ತಿಳಿದುಬಂದಿದೆ. 

ವೆಬ್ದುನಿಯಾವನ್ನು ಓದಿ