ಕಾಂಗ್ರೆಸ್‌ನದ್ದು ಹಿಂಬಾಗಿಲಲ್ಲಿ ನುಗ್ಗುವ ಯತ್ನವಂತೆ: ಪ್ರತಿಭಟನೆಗೆ ಸಿದ್ಧವಾದ ಬಿಜೆಪಿ

ಗುರುವಾರ, 3 ಸೆಪ್ಟಂಬರ್ 2015 (16:33 IST)
ಬಿಬಿಎಂಪಿ ಗದ್ದುಗೆ ಏರಲು ಕಾಂಗ್ರೆಸ್ ಅಸಂವಿಧಾನಿಕ ದಾರಿ ತುಳಿದಿದ್ದು ಹಿಂಬಾಗಿಲಿನ ಮೂಲಕ ಅಕ್ರಮವಾಗಿ ಅಧಿಕಾರ ಹಿಡಿಯುವ ಯತ್ನ ನಡೆಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ನಿರಂತರವಾಗಿ 5 ದಿನಗಳ ಕಾಲ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. 
 
ಹೌದು, ಇಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರ ನೇತೃತ್ವದಲ್ಲಿ ನಗರದ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಘಟಕದ ಮುಖ್ಯ ಕಚೇರಿಯಲ್ಲಿ ಸಭೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. 
 
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಾಯಕ ಅಶೋಕ್, ಬಿಬಿಎಂಪಿ ಗದ್ದುಗೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸುವುದು ಖಚಿತ. ಅಲ್ಲದೆ ನಾಳೆಯಿಂದಲೇ ಪ್ರತಿಭಟನೆ ಆರಂಭವಾಗಲಿದ್ದು, ನಿರಂತರವಾಗಿ 5 ದಿನಗಳ ಕಾಲ ಧರಣಿ ನಡೆಸಲಿದ್ದೇವೆ. ಪ್ರತಿಭಟನೆಯ ಎರಡನೇ ದಿನವಾದ ಶನಿವಾರ ರಾಜ ಭವನದ ವರೆಗೂ ಕೂಡ ಕಾಲ್ನಡಿಗೆ ತೆರಳಿ ಮುತ್ತಿಗೆ ಹಾಕಲಿದ್ದೇವೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರನ್ನು ಕೆರೆಸಿ ಛೀಮಾರಿ ಹಾಕುವಂತೆ ರಾಜ್ಯಪಾಲರಿಗೆ ಮನವಿ ಮಾಡಲಿದ್ದೇವೆ ಎಂದರು. 
 
ಇದೇ ವೇಳೆ, ಕಾಂಗ್ರೆಸ್ ಹಿಂಭಾಗಿಲಿನ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದು, ವಿಧಾನ ಪರಿಷತ್ ಮತ್ತು ರಾಜ್ಯಸಭೆಗೆ ನೂತನ ಹೆಸರಗಳನ್ನು ಸೇರಿಸುವ ಮೂಲಕ ಗದ್ದುಗೆ ಕಸಿಯಲು ಹುನ್ನಾರ ನಡೆಸುತ್ತಿದೆ. ಬೆಂಗಳೂರಿನ ಜನತೆ ಕಾಂಗ್ರೆಸ್‌ಗೆ ಈಗಾಗಲೇ ಕಪಾಳ ಮೋಕ್ಷ ಮಾಡಿದ್ದು. ತಿರಸ್ಕರಿಸಿ ಕಾಂಗ್ರೆಸ್‌ಗೆ ಕೇವಲ 76 ಸ್ಥಾನಗಳನ್ನು ನೀಡಿ ಬಿಜೆಪಿಗೆ 100 ಸ್ಥಾನ ಗೆಲ್ಲಿಸಿಕೊಟ್ಟಿದ್ದಾರೆ. ಆದರೂ ಕಾಂಗ್ರೆಸ್ ಬುದ್ದಿ ಕಲಿತಿಲ್ಲ. ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದು, ಪಕ್ಷೇತರರನ್ನು ಕೊಚ್ಚಿಯಲ್ಲಿರಿಸಿ ಕುತಂತ್ರ ಹೆಣೆಯುತ್ತಿದೆ ಎಂದು ಆರೋಪಿಸಿದರು.  
 
ಇದೇ ವೇಳೆ, ಭವಿಷ್ಯದಲ್ಲಿ ಬಿಜೆಪಿಯಲ್ಲಿನ ಕಾರ್ಯಕರ್ತರೆಲ್ಲರೂ ಸೇರಿ ಕಾಂಗ್ರೆಸ್‌ನ್ನು ಬುಡ ಸಮೇತ ಕಿತ್ತೊಗೆಯಲಿದ್ದೇವೆ ಎಂದ ಅವರು, ಕಾಂಗ್ರೆಸ್ ಅನುಸರಿಸುತ್ತಿರುವ ಚಟುವಟಿಕೆ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ನಗರದ ಟೌನ್ ಹಾಲ್‌ನಲ್ಲಿ ನಾಳೆಯಿಂದಲೇ ಪ್ರತಿಭಟನೆ ನಡೆಸಲಿದ್ದೇವೆ. ಪ್ರತಿಭಟನೆಯಲ್ಲಿ ನೂತನ ಬಿಜೆಪಿ ಕಾರ್ಪೊರೇಟರ್‌ಗಳೂ ಸೇರಿದಂತೆ ಎಲ್ಲರೂ ಕೂಡ ಕಪ್ಪು ಪಟ್ಟಿ ಧರಿಸಿ ಹೋರಾಟಕ್ಕಿಳಿಯಲಿದ್ದೇವೆ ಎಂದರು. 
 
ಬಳಿಕ, ಮಲ್ಲಿಕಾರ್ಜುನ್ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬಂದಲ್ಲಿ ಸಿದ್ದರಾಮಯ್ಯನವರ ಸಿಎಂ ಕುರ್ಚಿ ಅಲ್ಲಾಡಲಿದೆ ಎಂಬ ಭಯದಿಂದ ಸಿಎಂ ಸಿದ್ದರಾಮಯ್ಯನವರು ಇಂತಹ ಒಳ ಸಂಚನ್ನು ಅನುಸರಿಸುತ್ತಿದ್ದಾರೆ ಎಂದೂ ಆರೋಪಿಸಿದರು. 

ವೆಬ್ದುನಿಯಾವನ್ನು ಓದಿ