ರೈತರಿಗೆ ನೀರು ದೊರೆತಿದ್ರೆ ಆತ್ಮಹತ್ಯೆಗೆ ಶರಣಾಗುವ ಸ್ಥಿತಿ ಬರುತ್ತಿರಲಿಲ್ಲ: ಪ್ರಧಾನಿ ಮೋದಿ

ಶನಿವಾರ, 27 ಫೆಬ್ರವರಿ 2016 (17:25 IST)
ರೈತರಿಗೆ ಸದಾ ನೀರು ದೊರೆಯುತ್ತಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗುತ್ತಿರಲಿಲ್ಲ. ಕೇಂದ್ರ ಸರಕಾರ ನೀಡಿದ ಪರಿಹಾರ ಧನವನ್ನು ರಾಜ್ಯ ಸರಕಾರ ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಪ್ರಧಾನಿ ಮೋದಿ ಗುಡುಗಿದರು.
 
ನಗರದಲ್ಲಿ ಆಯೋಜಿಸಿ ರೈತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ನೀರು ಅನ್ನೋದು ಕಾರ್ಖಾನೆಯಲ್ಲಿ ತಯಾರಾಗುವುದಿಲ್ಲ. ನೀರು ಪರಮಾತ್ಮನ ಪ್ರಸಾದವಾಗಿದೆ. ಒಂದೊಂದು ಹನಿ ತುಂಬಾ ಮಹತ್ವದ್ದಾಗಿದೆ. ನೀರು ಪೋಲಾಗದಂತೆ ತಡೆಯಬೇಕು ಎಂದು ಕರೆ ನೀಡಿದರು. 

 ಆದ್ದರಿಂದ ದೇಶದಲ್ಲಿ ನದಿ ಜೋಡಣೆಯ ಕಾರ್ಯ ವೇಗವಾಗಿ ಸಾಗುತ್ತಿದೆ. ಮುಂಬರುವ ಕೆಲ ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದರು.
 
ಕೃಷಿ ಕ್ಷೇತ್ರ, ಉತ್ಪಾದನಾ ಕ್ಷೇತ್ರ, ಸೇವಾ ಕ್ಷೇತ್ರ ಮತ್ತು ಇತರ ಕ್ಷೇತ್ರಗಳಲ್ಲಿ ಸರಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅನ್ನದಾತರಿಗೆ ನೀರು ದೊರೆತರೆ ಭೂಮಿಯಲ್ಲಿ ಚಿನ್ನ ಬೆಳೆಯುವಂತಹ ರೈತರಾಗಿದ್ದಾರೆ ಎಂದು ಹೊಗಳಿದರು.  
 
18 ತಿಂಗಳ ಹಿಂದೆ ಭ್ರಷ್ಟಾಚಾರ ತಾಂಡವವಾಡುತ್ತಿದ್ದ ವೇಳೆ ನನಗೆ ದೇಶದ ಸೇವಕನಾಗಿ ಕೆಲಸ ಮಾಡುವ ಅವಕಾಶ ದೊರೆತಿದೆ. ವಿಶ್ವದಲ್ಲಿ ಭಾರತವನ್ನು ಯಾರು ಕ್ಯಾರೆ ಎನ್ನದಿದ್ದಾಗ, ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ, ವಿಶ್ವದಲ್ಲಿ ಹೊಸ ಇತಿಹಾಸ ರಚಿಸಿದೆ
 
ಭಾರತದ ಆರ್ಥಿಕತೆ ಭಾರಿ ವೇಗದಲ್ಲಿ ಚೇತರಿಕೆಯತ್ತ ಸಾಗುತ್ತಿದೆ. ಇವತ್ತು ಜಗತ್ತಿನ ಅತಿ ದೊಡ್ಡ ಆಶಾಕಿರಣ ಎಂದರೆ ಹಿಂದೂಸ್ತಾನ್ ಎನ್ನುವಂತಾಗಿದೆ. ವಿಶ್ವದಲ್ಲಿಯೇ ಆರ್ಥಿಕ ಪ್ರಗತಿಯಲ್ಲಿರುವ ಏಕೈಕ ದೇಶ ಭಾರತ ದೇಶವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
 
ಕಡಿಮೆ ಜಲಸಂಪನ್ಮೂಲ ಹೊಂದಿರುವ ಇಸ್ರೇಲ್ ದೇಶ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ದಾಖಲಿಸಿದೆ. ಅದರಂತೆ, ದೇಶದಲ್ಲಿ ಕೂಡಾ ಕೃಷಿ ಕ್ರಾಂತಿ ಜಾರಿಗೊಳಿಸಲು ಕೇಂದ್ರ ಸರಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ