ಲೋಕಾಯುಕ್ತರ ಪದಚ್ಯುತಿ ಪ್ರಕ್ರಿಯೆಗೆ ಚಾಲನೆ ನೀಡಿದ ಬಿಜೆಪಿ ?!

ಮಂಗಳವಾರ, 18 ಆಗಸ್ಟ್ 2015 (11:58 IST)
ಲೋಕಾಯುಕ್ತ ತಿದ್ದುಪಡಿ ಕಾಯಿದೆಗೆ ರಾಜ್ಯಪಾಲರು ಅಂಗೀಕಾರ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಇಂದು ಪ್ರತಿಕ್ರಿಯಿಸಿದ್ದು, ಲೋಕಾಯುಕ್ತರ ಪದಚ್ಯುತಿ ಪ್ರಕ್ರಿಯೆಗೆ ನಮ್ಮ ಪಕ್ಷದಿಂದ ಈಗಾಗಲೇ ಚಾಲನೆ ನೀಡಲಾಗಿದ್ದು ಪಕ್ಷದ ಸದಸ್ಯರಿಂದ ಸಹಿ ದಾಖಲಿಸುವ ಪ್ರಕ್ರಿಯೆ ಕೈಗೊಂಡಿದ್ದೇವೆ ಎಂದಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಕಾಯಿದೆ ತಿದ್ದಪಡಿಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಶಾಸಕರಿಂದ ಈಗಾಗಲೇ ಸಹಿ ಸಂಗ್ರಹಿಸುತ್ತಿದ್ದು, ಲೋಕಾಯುಕ್ತರ ಪದಚ್ಯುತಿ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಆ ಮೂಲಕ ಆದಷ್ಟು ಬೇಗ ಕಳಂಕಿತ ಲೋಕಾಯುಕ್ತರಾದ ನ್ಯಾ.ವೈ.ಭಾಸ್ಕರ್ ರಾವ್ ಅವರನ್ನು ಲೋಕಾಯುಕ್ತ ಸ್ಥಾನದಿಂದ ಪದಚ್ಯುತಿಗೊಳಿಸಲಿದ್ದೇವೆ ಎಂದಿದ್ದಾರೆ. 
 
ಇದೇ ವೇಳೆ ಮಾತನಾಡಿದ ಅವರು, ಸಂಗ್ರಹಿಸಿದ ಸಹಿಗಳ ಪಟ್ಟಿಯನ್ನು ಸಭಾಪತಿಗಳು ಹಾಗೂ ರಾಜ್ಯಪಾಲರಿಗೆ ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ಸಮಿತಿ ನೇಮಿಸುವಂತೆ ಮನವಿ ಮಾಡಲಿದ್ದೇವೆ. ತರುವಾಯ ಸಭಾಪತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ. ಸಮಿತಿಯ ನೇತೃತ್ವವನ್ನು ನ್ಯಾಯಾಧೀಶ ಹುದ್ದೆ ನಿರ್ವಹಿಸಿದವರು ವಹಿಸಿಕೊಳ್ಳಲಿದ್ದಾರೆ. ಬಳಿಕ ಸಮಿತಿಯು 90 ದಿನಗಳ ಒಳಗಾಗಿ ತಮ್ಮ ವರದಿ ನೀಡಲಿದೆ. ಆ ವರದಿಯ ಆಧಾರದ ಮೇಲೆ ಲೋಕಾಯುಕ್ತರನ್ನು ಪದಚ್ಯುತಿಗೊಳಿಸಲಾಗುತ್ತದೆ. ಇದಕ್ಕೆ ಮತ್ತೆ ಅಧಿವೇಶನ ಕರೆಯುವ ಅಗತ್ಯವಿಲ್ಲ ಎಂದರು.   

ವೆಬ್ದುನಿಯಾವನ್ನು ಓದಿ