ಪಕ್ಷೇತರ ಕಾರ್ಪೋರೇಟರ್‌ಗಳನ್ನು ಬೈಯ್ದು ಹೊರಗಟ್ಟಿದ್ದ ಬಿಜೆಪಿ ನಾಯಕರು

ಸೋಮವಾರ, 31 ಆಗಸ್ಟ್ 2015 (21:25 IST)
ಬಿಬಿಎಂಪಿ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮೂವರು ಪಕ್ಷೇತರ ಕಾರ್ಪೋರೇಟರ್‌ಗಳು ಬಿಜೆಪಿ ಸೇರ್ಪಡೆಗೊಳ್ಳಲು ಬಿಜೆಪಿ ಕಚೇರಿಗೆ ಆಗಮಿಸಿದಾಗ ಅವರನ್ನು ಬಿಜೆಪಿ ನಾಯಕರು ಅವಮಾನಗೊಳಿಸಿ ಹೊರಗಟ್ಟಿರುವ ಸಂಗತಿ ಬಹಿರಂಗವಾಗಿದೆ.
 
ಕೋನೇನ ಅಗ್ರಹಾರ ಕಾರ್ಪೋರೇಟರ್ ಚಂದ್ರಪ್ಪ ರೆಡ್ಡಿ, ಮಾರತಹಳ್ಳಿ ಕಾರ್ಪೋರೇಟರ್ ಎನ್.ರಮೇಶ್ ಮತ್ತು ಎಸ್.ರಘು ಬಿಜೆಪಿ ಸೇರ್ಪಡೆಗಾಗಿ ಬಿಜೆಪಿ ನಾಯಕರ ದುಂಬಾಲು ಬಿದ್ದಿದ್ದರು ಎನ್ನಲಾಗಿದೆ.  
  
ಆದರೆ, ಬಿಜೆಪಿ ನಾಯಕರಾದ ಅರವಿಂದ್ ಲಿಂಬಾವಳಿ ,ಸಂಸದ ಪಿ.ಸಿ ಮೋಹನ್ ಸೇರಿದಂತೆ ಮತ್ತಿಬ್ಬರು ಬಿಜೆಪಿ ನಾಯಕರು ನೂತನ ಕಾರ್ಪೋರೇಟರ್‌ಗಳನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ವಿರೋಧಿಸಿದ್ದರು ಎಂದು ಮೂಲಗಳು ತಿಳಿಸಿವೆ. ನಮ್ಮ ಅನುಮತಿಯಿಲ್ಲದೇ ಪಕ್ಷೇತರರನ್ನು ಬಿಜೆಪಿಗೆ ಸೇರ್ಪಡೆಗೊಳಿಸಬಾರದು ಎಂದು ಖಡಾಖಂಡಿತವಾಗಿ ಹೇಳಿದ್ದರು ಎನ್ನಲಾಗಿದೆ.
 
ಬಿಜೆಪಿ ನಾಯಕರ ವರ್ತನೆಗೆ ಆಕ್ರೋಶಗೊಂಡ ಪಕ್ಷೇತರ ಶಾಸಕರು ಕಾಂಗ್ರೆಸ್ ಪಕ್ಷದ ಪಾಳಯಕ್ಕೆ ಜಿಗಿದಿದ್ದಾರೆ.
 
ಇದೀಗ ಬಹುಮತದ ಕೊರತೆ ಎದುರಿಸುತ್ತಿರುವ ಬಿಜೆಪಿಗೆ ತನ್ನದೇ ನಾಯಕರು ತೋರಿದ ವರ್ತನೆಯಿಂದ ಬಿಬಿಎಂಪಿ ಪಾಲಿಕೆಯಲ್ಲಿ ವಿರೋಧ ಪಕ್ಷದಲ್ಲಿ ಕೂರುವ ಪರಿಸ್ಥಿತಿ ಎದುರಾಗಿದೆ. 

ವೆಬ್ದುನಿಯಾವನ್ನು ಓದಿ