ಒಂದು ಕಡೆ ಬಿಜೆಪಿ ಗದ್ದಲ, ಇನ್ನೊಂದು ಕಡೆ ವಿಧೇಯಕಗಳಿಗೆ ಅಂಗೀಕಾರ

ಸೋಮವಾರ, 28 ಜುಲೈ 2014 (15:25 IST)
ಕರ್ನಾಟಕ ವಿಧಾನಸಭೆ ಇಂದು ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಒಂದು ಕಡೆ ಅರ್ಕಾವತಿ ಡಿನೋಟಿಫಿಕೇಶನ್ ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಬಿಜೆಪಿ ಗೌಜು, ಗದ್ದಲ ಮಾಡುತ್ತಾ ಇತ್ತು. ಇನ್ನೊಂದು ಕಡೆ ಬಿಜೆಪಿಯ ಗದ್ದಲವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಸರ್ಕಾರ ಒಂದೊಂದಾಗಿ ವಿಧೇಯಕಗಳಿಗೆ ಅಂಗೀಕಾರ ಪಡೆಯುತ್ತಾ ಹೋಯಿತು. ಸದನದಲ್ಲಿ ಕಾಂಗ್ರೆಸ್ ಬಹಮತವಿದ್ದಿದ್ದರಿಂದ ಯಾವುದೇ ಚರ್ಚೆಯಿಲ್ಲದೇ ವಿಧೇಯಕಗಳನ್ನು ಪಾಸು ಮಾಡಿ ಕಳಿಸಲಾಯಿತು.

ವಿಧಾನಸಭೆ ಕಲಾಪ 2.50ಕ್ಕೆ ಷುರುವಾದ ನಂತರ ಮತ್ತೆ ಅರ್ಕಾವತಿ ಬಡಾವಣೆ ಹಗರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸುತ್ತಾ ಬಿಜೆಪಿ ಸದಸ್ಯರು ಕಾಗದಗಳನ್ನು ಹರಿದುಹಾಕಿ ಪ್ರತಿಭಟನೆ ನಡೆಸಿದರು. ಜೆಡಿಎಸ್ ಕೂಡ ಕೆರೆಗಳ ಒತ್ತುವರಿ ಕುರಿತು ಪ್ರತಿಭಟನೆ ನಡೆಸಿತು.ಅಷ್ಟು ಜೋರಾಗಿ, ಗಟ್ಟಿ ಧ್ವನಿಯಲ್ಲಿ ಗಲಾಟೆ ನಡೆಯುತ್ತಿದ್ದರೂ ಅನೇಕ ವಿಧೇಯಕಗಳಿಗೆ ಯಾವುದೇ ಚರ್ಚೆಯಿಲ್ಲದೇ ಸದನದಲ್ಲಿ ಅಂಗೀಕಾರ ನೀಡುತ್ತಿರುವುದು ಸೋಜಿಗವಾಗಿ ಕಂಡುಬಂತು. ಆದರೆ ಅಧಿವೇಶನ ಇನ್ನೂ 3 ದಿನಗಳು ಬಾಕಿವುಳಿದಿದ್ದರಿಂದ ಸರ್ಕಾರಕ್ಕೆ ಬೇರೆ ದಾರಿಯೇ ಇರಲಿಲ್ಲ.  ಇನ್ನೊಂದು ಕಡೆ ವಿರೋಧ ಪಕ್ಷಗಳ ನಡುವೆ ಹೊಂದಾಣಿಕೆಯ ಕೊರತೆ ಕಂಡುಬಂತು.

ಬಿಜೆಪಿ ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರೆ, ಜೆಡಿಎಸ್ ಕೆರೆಗಳ ಒತ್ತುವರಿ ನಡೆದ ಬಗ್ಗೆ ಪ್ರತಿಭಟನೆ ನಡೆಸಿದವು.  ಹೀಗೆ ವಿಧಾನಸಭೆ ಗಲಾಟೆ, ಗೌಜಿನಲ್ಲಿ ಮುಂದುವರಿದಿದ್ದರಿಂದ ಕಲಾಪವನ್ನು ಮತ್ತೆ ಒಂದು ಗಂಟೆ ಕಾಲ ಮುಂದೂಡಲಾಯಿತು. 

ವೆಬ್ದುನಿಯಾವನ್ನು ಓದಿ