ರಾಜ್ಯಪಾಲರ ಮೂಲಕ ಸರ್ಕಾರವನ್ನು ಕಟ್ಟಿಹಾಕಲು ಬಿಜೆಪಿ ರಣತಂತ್ರ

ಸೋಮವಾರ, 1 ಸೆಪ್ಟಂಬರ್ 2014 (10:32 IST)
ರಾಜ್ಯಕ್ಕೆ ನರೇಂದ್ರ ಮೋದಿ ಆಪ್ತರಾದ ಹೊಸ ರಾಜ್ಯಪಾಲರ ನೇಮಕದ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಚಳಿ, ಜ್ವರ ಹುಟ್ಟಿಸುವ ಬಿಜೆಪಿ ಯೋಜನೆ ನಡುವೆ ಬೆಂಗಳೂರಲ್ಲಿ ಇಂದು ರಾಜ್ಯ ಕೋರ್ ಕಮಿಟಿ ಸಭೆ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆಯಲಿದೆ. ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಕುರಿತಂತೆ ಈ ಸಭೆಯಲ್ಲಿ ಸಿಎಂ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ನಿರ್ಧರಿಸುವ ಸಾಧ್ಯತೆಯಿದೆ.

ಕಾನೂನು ಸಮರಕ್ಕೆ ರಾಜ್ಯಪಾಲರ ಅನುಮತಿ ಅವಶ್ಯಕವಾಗಿರುವುದರಿಂದ ಅವರ ಅನುಮತಿ ಪಡೆಯುವ ಬಗ್ಗೆ ಚರ್ಚಿಸಲಾಗುತ್ತದೆ. ಮೈತ್ರಿಯಾ ಮತ್ತು ಡಿವಿಎಸ್ ಪುತ್ರ ಕಾರ್ತಿಕ್ ಗೌಡ ಅವರ ವಿವಾಹದ ವಿವಾದವನ್ನು ಕುರಿತು ಕೂಡ ಚರ್ಚಿಸುವ ಸಂಭವವಿದೆ. ಸದಾನಂದ ಗೌಡರಿಗೆ ನೈತಿಕ ಬೆಂಬಲ ನೀಡುವ ಬಗ್ಗೆ ಕೂಡ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಸಂಭವವಿದೆ. ಹೊಸದಾಗಿ ನೇಮಕವಾಗಿರುವ ರಾಜ್ಯಪಾಲರ ಮೂಲಕ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕುವ ತಂತ್ರವನ್ನು ರೂಪಿಸಬಹುದೆಂದು ಭಾವಿಸಲಾಗಿದೆ.

ಸಂಸದ ಯಡಿಯೂರಪ್ಪ, ಪ್ರಹ್ಲಾದ್ ಜೋಷಿ, ಈಶ್ವರಪ್ಪ, ಸದಾನಂದ ಗೌಡ, ಅನಂತಕುಮಾರ್ ಮುಂತಾದ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಉಪಚುನಾವಣೆ ಸೋಲಿನ ಬಗ್ಗೆಯೂ ಸಭೆಯಲ್ಲಿ ಆತ್ಮಾವಲೋಕನ ನಡೆಯಲಿದೆ. 

ವೆಬ್ದುನಿಯಾವನ್ನು ಓದಿ