ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿರುದ್ಧ ಬಿಜೆಪಿ ಪ್ರತಿಭಟನೆ: ಜಗ್ಗೇಶ್ ವೈರಲ್ ಭಾಷಣ

ಶುಕ್ರವಾರ, 4 ಸೆಪ್ಟಂಬರ್ 2015 (13:02 IST)
ಕಾಂಗ್ರೆಸ್ ಪಕ್ಷವು ಜೆಡಿಎಸ್ ಜೊತೆಗೂಡಿ ಅಪವಿತ್ರ ಮೈತ್ರಿ ಮಾಡಿಕೊಂಡು ಬಿಬಿಎಂಪಿಯ ಅಧಿಕಾರದ ಗದ್ದುಗೆ ಏರಲು ಯತ್ನಿಸುತ್ತಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಘಟಕವು ಇಂದು ನಗರದ ಟೌನ್ ಹಾಲ್‌ನಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.  
 
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೆ ಬಿಬಿಎಂಪಿ ಗದ್ದುಗೆ ಏರಲು ಅಪವಿತ್ರ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು. 
 
ಇದೇ ವೇಳೆ ಮಾತನಾಡಿದ ನಾಯಕ ಜಗ್ಗೇಶ್, ಕಾಂಗ್ರೆಸ್ ಪಕ್ಷಕ್ಕೆ ಕೇವಲ ಕೆಲವೇ ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಬೆಂಗಳೂರಿನ ಜನ ಬುದ್ಧಿ ಕಲಿಸಿದ್ದಾರೆ. ಆದರೂ ಕೂಡ ಕಾಂಗ್ರೆಸ್‌ಗೆ ಬುದ್ಧಿ ಬಂದಿಲ್ಲ. ಜೆಡಿಎಸ್ ಪಕ್ಷದೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಳ್ಳುವ ಮೂಲಕ ಹಿಂಬಾಗಿಲಿನಿಂದ ನುಗ್ಗಲು ಯತ್ನಿಸುತ್ತಿದೆ. ಅಲ್ಲದೆ ಕಾಂಗ್ರೆಸ್ ಹೈಕಮಾಂಡ್‌ಗಳೂ ಕೂಡ ನೀವು ಹಿಂದಿನಿಂದ, ಮುಂದಿನಿಂದ ಅಥವಾ ಮೇಲಿನಿಂದ ಹೇಗಾದರೂ ಕೂಡ ತೂರಿ ಅಧಿಕಾರ ಹಿಡಿಯಿರಿ ಎಂದು ಸೂಚಿಸಿದ್ದಾರೆ. ಇದರಿಂದ ತನ್ನ ಕುರ್ಚಿ ಅಲ್ಲಾಡುತ್ತದೆ ಎಂಬ ಭಯದಿಂದ ಸಿಎಂ ಸಿದ್ದರಾಮಯ್ಯನವರು ಈ ಅನೀತಿಯನ್ನು ಅನುಸರಿಸುತ್ತಿದ್ದಾರೆ. ಆದರೆ ಬಿಬಎಂಪಿ ಫಲಿತಾಂಶದಿಂದ ಕಾಂಗ್ರೆಸ್ ಪಕ್ಷ ಬುದ್ದಿ ಕಲಿಯಬೇಕಿತ್ತು. ಕಾಂಗ್ರೆಸ್‌ನ ಈ ಕುತಂತ್ರದಿಂದ ಮುಂದಿನ ವಿಧಾನಸಭೆಯಲ್ಲಿ ಬಿಜೆಪಿ ಸಾಕಷ್ಟು ಬಹುಮತ ಗಳಿಸುವುದು ಖಚಿತ. ಅದಕ್ಕೆ ಕಾಂಗ್ರೇಸಿಗರೇ ಅನುವು ಮಾಡಿಕೊಡುತ್ತಿದ್ದಾರೆ ಎಂದರು. 
 
ಬಳಿಕ, ಜೆಡಿಎಸ್ ವಿಧಾನ ಪರಿಷತ್‌ನಲ್ಲಿ ತಮ್ಮೊಂದಿಗೆ ಸೇರಿ ಕೆಲಸ ಮಾಡುತ್ತಿದ್ದರು. ಆದರೆ ಅವರು ಅಧಿಕಾರದ ಆಸೆಗಾಗಿ ಪ್ರಸ್ತುತ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸುತ್ತಿದ್ದಾರೆ. ಇದು ಸಮಂಜಸವಲ್ಲ ಎಂದು ಆರೋಪಿಸಿದರು.    
 
ಪಕ್ಷದ ನಾಯಕ, ಮಾಜಿ ಡಿಸಿಎಂ, ಶಾಸಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇಂದಿನಿಂದ ಐದು ದಿನಗಳ ಕಾಲ ನಿರಂತರವಾಗಿ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ಬಿಜೆಪಿಯ ಉನ್ನತ ನಾಯಕರಾದ ಜಗ್ಗೇಶ್, ಮಾಳವಿಕಾ ಅವಿನಾಶ್, ವಿಧಾನ ಪರಿಷತ್ ಸದಸ್ಯ ಅಶ್ವತ್ಥ್ ನಾರಾಯಣ, ನಗರದ ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್, ಶಾಸಕ ಸುರೇಶ್ ಕುಮಾರ್ ಸೇರಿದಂತೆ ಬಿಜೆಪಿಯ ಅನೇಕ ಮಂದಿ ಕಾರ್ಯಕರ್ತರು ಭಾಗಿಯಾಗಿದ್ದರು. 

ವೆಬ್ದುನಿಯಾವನ್ನು ಓದಿ