ಗುಂಡ್ಲುಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹಾಕಬಾರದಿತ್ತು: ಸಿಎಂ ಸಿದ್ದರಾಮಯ್ಯ

ಬುಧವಾರ, 29 ಮಾರ್ಚ್ 2017 (14:31 IST)
ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹಾದೇವ್ ಪ್ರಸಾದ್ ವಿರುದ್ಧ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದಿವಂಗತ ಎಚ್.ಎಸ್ ಮಹಾದೇವ್ ಪ್ರಸಾದ್ ಅಜಾತ ಶತ್ರುವಿನಂತೆ. ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯನ್ನು ಹಾಕಬಾರದಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಬಿ.ಎಸ್.ಯಡಿಯೂರಪ್ಪ ಗೀತಾ ಮಹಾದೇವ ಪ್ರಸಾದ್ ಅವರಿಗೆ ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ಸಾಂತ್ವನ ಹೇಳುವ ಸಂದರ್ಭದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಭರವಸೆ ನೀಡಿರಬಹುದು ಎಂದರು. 
 
ಬಿಜೆಪಿಯವರು ಅಭ್ಯರ್ಥಿ ಹಾಕದಿದ್ರೆ ಸೂಕ್ತವಾಗಿರುತ್ತಿತ್ತು. ಕಳೆದ 25 ವರ್ಷಗಳಿಂದ ಪ್ರಸಾದ್ ನಿರಂತರವಾಗಿ ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಈ ಬಾರಿ ಕೂಡಾ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹಾದೇವ್ ಪ್ರಸಾದ್ ಚುನಾವಣೆಯಲ್ಲಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
 
ನಾಳೆಯಿಂದ ಉಪಚುನಾವಣೆ ಪ್ರಚಾರ ಅಂತ್ಯಗೊಳ್ಳುವವರೆಗೆ ಎರಡೂ ಕ್ಷೇತ್ರಗಳಲ್ಲಿ ಠಿಕಾಣಿ ಹೂಡಿ, ಪಕ್ಷದ ಅಭ್ಯರ್ಥಿಯ ಗೆಲುವಿಗೆ ರಣತಂತ್ರ ರೂಪಿಸಲಾಗುವುದು ಎಂದರು.
 
ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಖಚಿತ. ಬಿಜೆಪಿಯವರು ತಿಪ್ಪರಲಾಗಾ ಹಾಕಿದರೂ ಉಪಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಜನತೆ ಬಿಜೆಪಿಯನ್ನು ಯಾವುದೇ ಕಾರಣಕ್ಕೂ ನಂಬುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ