ಶಿವಮೊಗ್ಗದಲ್ಲಿ ನಾಮಫಲಕ ರಾಜಕೀಯ: ಶಾಸಕರ ಹೆಸರಿಲ್ಲದಿದ್ದರೆ ಅನುದಾನ ಕಟ್ ?!

ಮಂಗಳವಾರ, 1 ಸೆಪ್ಟಂಬರ್ 2015 (16:11 IST)
ಬಿಬಿಎಂಪಿಯ ಗದ್ದುಗೆ ಏರುವುದು ಯಾರು ಎಂಬ ವಿಷಯವು ರಾಜ್ಯದೆಲ್ಲೆಡೆ ಚರ್ಚೆಗೆ ಗ್ರಾಸವಾಗಿ ಗಮನ ಸೆಳೆಯುತ್ತಿರುವಾಗ ಶಿವಮೊಗ್ಗ ಮಹಾನಗರ ಪಾಲಿಕೆಯ ಕಾರ್ಪೊರೇಟರ್‌ಗಳು ತಮ್ಮನ್ನು ತಾವು ಹೈಟೆಕ್ ನಾಮಫಲಕಗಳಲ್ಲಿ ಬಿಂಬಿಸಿಕೊಳ್ಳುವ ಮೂಲಕ ಪ್ರಚಾರ ರಾಜಕೀಯ ನಡೆಸುತ್ತಿದ್ದಾರೆ. 
 
ಹೌದು, ನಗರದ ಜನತೆ ಮೂಲಭೂತ ಸೌಲಭ್ಯಗಳೇ ಇಲ್ಲದೆ ನರಳುತ್ತಿದ್ದರೂ ಕೂಡ ಕಾರ್ಪೊರೇಟರ್‌ಗಳು ಮಾತ್ರ ಪ್ರಸ್ತುತ ನಗರದೆಲ್ಲೆಡೆ ಹೈಟೆಕ್ ನಾಮಫಲಕಗನ್ನು ಹಾಕಿ ಸಾರ್ವಜನಿಕ  ಹಣವನ್ನು ದುಂದುವೆಚ್ಚ ಮಾಡುತ್ತಿದ್ದಾರೆ. ಪ್ರಸ್ತುತ ಪ್ರತೀ ವಾರ್ಡ್‌ಗಳಿಲ್ಲಿಯೂ ಕೂಡ ಈ ಹೈಟೆಕ್ ನಾಮಫಲಕಗಳು ರಾರಾಜಿಸುತ್ತಿದ್ದು, ಪ್ರತಿ ವಾರ್ಡ್‌ನಲ್ಲಿ 10 ಲಕ್ಷ ವ್ಯಯಿಸಿ ಸ್ಟೀಲ್ ನಿರ್ಮಿತ ನಾಮಫಲಕಗಳನ್ನು ಹಾಕಲಾಗಿದೆ. ಒಟ್ಟು 35 ವಾರ್ಡ್‌ಗಳ ಪೈಕಿ 20ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಕೇವಲ ತಮ್ಮ ಹೆಸರುಗಳಿರುವ ನಾಮಫಲಕಗಳನ್ನು ಪಾಲಿಕೆ ಸದಸ್ಯರು ಹಾಕಿದ್ದಾರೆ. ಸರ್ಕಾರವು 2015-16ನೇ ಸಾಲಿನಲ್ಲಿ ಪಾಲಿಕೆಗೆ 100 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಇದನ್ನು ಇಂತಹ ದುಂದು ವೆಚ್ಚಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 
 
ಇನ್ನು ಶಿವಮೊಗ್ಗ ನಗರ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಅವರ ಹೆಸರನ್ನು ನಾಮಫಲಕದಲ್ಲಿ ಹಾಕಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಸದಸ್ಯರು ಪ್ರತಿನಿಧಿಸುತ್ತಿರುವ 18ನೇ ವಾರ್ಡ್‌‌ನ ಅಭಿವೃದ್ಧಿಗೆಂದು ಬಿಡುಗಡೆಗೊಂಡಿದ್ದ 25 ಲಕ್ಷ ರೂ. ಅನುದಾನವನ್ನು ವಾಪಾಸ್ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಕೆಲ ಮಂದಿ ಬಿಜೆಪಿ ಸದಸ್ಯರು ಅನುದಾನ ಕೈ ತಪ್ಪಿ ಹೋಗಬಹುದೆಂಬ ಭಯದಿಂದ ಕೈ ನಾಯಕರ ಹೆಸರುಗಳನ್ನು ತಮ್ಮ ನಾಮಫಲಕಗಳಲ್ಲಿ ಹಾಕಿಕೊಂಡಿದ್ದಾರೆ. ಶಿವಮೊಗ್ಗ ನಗರವು ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರಿರುವ ಖುಷಿಯಲ್ಲಿ ಜನರಿರುವಾಗ ಪಾಲಿಕೆ ಸದಸ್ಯರ ಇಂತಹ ದುರ್ವರ್ತನೆ ಸಾರ್ವಜನಿಕರನ್ನು ಕೆರಳಿಸಿದೆ. 

ವೆಬ್ದುನಿಯಾವನ್ನು ಓದಿ