ಚರ್ಚ್‌ ಮೇಲಿನ ಬಾಂಬ್ ದಾಳಿ ಪ್ರಕರಣ: 22 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

ಬುಧವಾರ, 17 ಡಿಸೆಂಬರ್ 2014 (16:51 IST)
2000ನೇ ಇಸವಿಯಲ್ಲಿ ರಾಜ್ಯದ ಹಲವು ಚರ್ಚ್‌ಗಳ ಮೇಲೆ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಇಂದು ತೀರ್ಪಿತ್ತಿದ್ದು, ಪ್ರಕರಣದಲ್ಲಿ ಆರೋಪಿಗಳಾಗಿದ್ದ 22 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
 
ಹೈಕೋರ್ಟ್ ನ ನ್ಯಾಯಾಮೂರ್ತಿ ಎನ್. ಕುಮಾರ್ ಈ ತೀರ್ಪನ್ನು ನೀಡಿದ್ದು, ತೀರ್ಪಿನಲ್ಲಿ ಕುವೆಂಪು ಅವರ ನಾಡಗೀತೆಯ ಒಂದು ಸಾಲ(ಹಿಂದೂ ಕ್ರೈಸ್ತ ಮುಸಲ್ಮಾನ ಜೈನರುದಾಯನ)ನ್ನು ತೀರ್ಪಿನಲ್ಲಿ ಬಳಸಿ ಆರೋಪಿಗಳು ಸ್ಫೋಟಕ್ಕೆ ನಡೆಸಿದ್ದ ಒಳಸಂಚು, ಸಾಮರಸ್ಯ ಕದಡುವ ಯತ್ನ ಹಾಗೂ ಸರ್ಕಾರದ ವಿರುದ್ಧ ಯುದ್ಧ ಹೂಡಿರುವುದು ಸೇರಿದಂತೆ ಎಲ್ಲವೂ ಸಾಬೀತಾಗಿದೆ. ಹಾಗಾಗಿ ಬಂಧಿತರೆಲ್ಲರೂ ಅಪರಾಧಿಗಳು ಎಂದು ಆದೇಶ ನೀಡಿದ್ದಾರೆ. ಇದೇ ವೇಳೆ ಇವರೆಲ್ಲರೂ ಕೂಡ ದೀನ್ ದಾರ್ ಅಂಜುಮಾನ್ ಸಂಸ್ಥೆಯ ಸದಸ್ಯರು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. 
 
ಶಿಕ್ಷಿತರಲ್ಲಿ ಒಟ್ಟು 22 ಮಂದಿ ಆರೋಪಿಗಳಿದ್ದು, ಇವರಲ್ಲಿ 10 ಮಂದಿಗೆ ಗಲ್ಲು ಶಿಕ್ಷೆಯನ್ನು ನೀಡಲು ಮಾರ್ಪಾಡು ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 
 
ಆರೋಪಿಗಳು ಕೋಮು ಸೌಹಾರ್ದತೆಯನ್ನು ಕದಡಲು ಬೆಂಗಳೂರು, ಹಬ್ಬಳ್ಳಿ ಹಾಗೂ ಕಲಬುರ್ಗಿಯಲ್ಲಿನ ಚರ್ಚ್‌ಗಳ ಮೇಲೆ ದಾಳಿ ನಡೆಸಿದ್ದರು. ಬಳಿಕ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ರಾಜ್ಯ ಪೊಲೀಸ್ ಇಲಾಖೆ ಯಶಸ್ವಿಯಾಗಿತ್ತು. ಆದರೆ, ಆರೋಪಿಗಳು ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಿಗಳು ನಾವಲ್ಲ. ಹಾಗಾಗಿ ನಮಗೆ ನ್ಯಾಯ ಒದಗಿಸಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಸಂಬಂಧ ವಿಶೇಷ ಕೋರ್ಟ್ ತೀರ್ಪು ನೀಡಿತ್ತು. ಇದೇ ತೀರ್ಪನ್ನು ಪ್ರಸ್ತುತ ಹೈಕೋರ್ಟ್ ಎತ್ತಿ ಹಿಡಿದಿದೆ.  

ವೆಬ್ದುನಿಯಾವನ್ನು ಓದಿ