ಆನಂದ್ ಗುರೂಜಿ ಮನೆ ಮುಂದೆ ನಕಲಿ ಬಾಂಬ್ ಪತ್ತೆ

ಶನಿವಾರ, 30 ಜನವರಿ 2016 (10:57 IST)
ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ ಅವರ ನಿವಾಸದ ಮನೆ ಮುಂದೆ ನಕಲಿ ಬಾಂಬ್ ಇಟ್ಟು ಜೀವ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ.

ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಕಾಮಾಕ್ಯ ಥಿಯೇಟರ್ ಹಿಂಭಾಗದಲ್ಲಿರುವ ಆನಂದ್ ಗುರೂಜಿ ಮನೆ ಮುಂದೆ ಇಂದು ಬೆಳಿಗ್ಗೆ ರಟ್ಟಿನ ಪೆಟ್ಟಿಗೆಯೊಂದು ಪತ್ತೆಯಾಗಿತ್ತು. ಸುಮಾರು 7 ಗಂಟೆ ಸುಮಾರಿಗೆ ತಮ್ಮ ಶಿಷ್ಯಂದಿರಿಂದ ಈ ಕುರಿತು ಮಾಹಿತಿ ಪಡೆದ ಗುರೂಜಿ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಅದರಲ್ಲಿ ಆಟಂ ಬಾಂಬ್ ಇಟ್ಟಿರುವುದು ಬೆಳಕಿಗೆ ಬಂದಿದೆ. ಜತೆಗೆ ಗುರೂಜಿಯವರಿಗೆ ಬೆದರಿಕೆ ಪತ್ರವನ್ನು ಸಹ ಇರಿಸಲಾಗಿದೆ.
 
ಬಾಕ್ಸ್ ಮೇಲೆ ಗುರೂಜಿಯವರ ಹರಿದ ಫೋಟೋ ಅಂಟಿಸಲಾಗಿದ್ದು, ಗುರೂಜಿ ಅವರಿಗೆ ಗೋ ರಕ್ಷಣೆ ಬಗ್ಗೆ ಧ್ವನಿ ಎತ್ತುವುದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡಲಾಗಿದೆ. 
 
ಪತ್ರದಲ್ಲಿ ಹೀಗೆ ಬರೆದಿದೆ: "ಏ ಆನಂದ, ಇತ್ತೀಚಿಗೆ ಹಸುಗಳ ಬಗ್ಗೆ ಮಾತನಾಡುವುದನ್ನುಹೆಚ್ಚು ಮಾಡಿದ್ದಿಯಾ. ನಮ್ಮ ಆಹಾರ ಅದು. ಹೀಗೆ ಮುಂದುವರೆದರೆ ಪರಿಣಾಮ ನೆಟ್ಟಗಿರುವುದಿಲ್ಲ. ನಾವು ನಿಮ್ಮನ್ನು ಬಿಡುವುದಿಲ್ಲ. ಮುಗಿಸುತ್ತೇವೆ. ಈ ಹಿಂದೆ 14 ನೇ ತಾರೀಖಿಗೆ ಬಲಿ ನೀಡಬೇಕೆಂದು ಯೋಜಿಸಿದ್ದೆವು. ಇನ್ನು 15 ದಿನಗಳಲ್ಲಿ ಬಲಿ ನೀಡುವುದು ಖಚಿತ". 
 
ಈ ಕುರಿತು ಪ್ರತಿಕ್ರಿಯಿಸಿರುವ ಗುರೂಜಿ ಭಾರತೀಯ ಸಂಪ್ರದಾಯದಲ್ಲಿ ಗೋವುಗಳಿಗೆ ಅಪಾರ ಗೌರವವಿದೆ. ನಾನು ಗೋರಕ್ಷಣೆ ಬಗ್ಗೆ ಮಾತನಾಡಿದ್ದಕ್ಕೆ ಜೀವ ಬೆದರಿಕೆ ಒಡ್ಡಲಾಗಿದೆ. ಈ ಹಿಂದೆ ನನ್ನ ಕಾರ್ ಗ್ಲಾಸ್ ಮೇಲೆ  ಬೆದರಿಕೆ ಪತ್ರ ಅಂಟಿಸಲಾಗಿತ್ತು. ಈ ಕುರಿತು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ.
6 ತಿಂಗಳ ಹಿಂದೆ ಮನೆ ಬಾಗಿಲಿಗೆ ಬೆದರಿಕೆ ಪತ್ರ ಅಂಟಿಸಲಾಗಿತ್ತು. ಇಂತಹ ಬೆದರಿಕೆಗಳಿಗೆ ನಾನು ಬಗ್ಗಲ್ಲ. ನಾನು ನಡೆಸುತ್ತಿದ್ದ ಧರ್ಮಕಾರ್ಯಗಳು ಯಥಾಸ್ಥಿತಿ ಮುಂದುವರೆಯಲಿವೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ