ಬಾಂಬ್ ಹುಸಿ ಕರೆ: ತುರ್ತು ಭೂ ಸ್ಪರ್ಶ ಮಾಡಿದ ಟರ್ಕಿ ವಿಮಾನ

ಮಂಗಳವಾರ, 7 ಜುಲೈ 2015 (15:01 IST)
ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಸಂದೇಶವಿದ್ದ ಹಿನ್ನೆಲೆಯಲ್ಲಿ ಟರ್ಕಿ ವಿಮಾನವೊಂದನ್ನು ನಗರದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. 
 
ಟರ್ಕಿಶ್ ಏರ್ಲೈನ್ಸ್‌ಗೆ ಸೇರಿದ ಟಿಕೆ-65 ಎಂಬ ವಿಮಾನವೇ ತುರ್ತು ಭೂ ಸ್ಪರ್ಶ ಮಾಡಿದ ವಿಮಾನವಾಗಿದ್ದು, ಬ್ಯಾಂಕಾಕ್‌ನಿಂದ ಇಸ್ತಾನ್‌ಬುಲ್‌ಗೆ ತೆರಳುತ್ತಿತ್ತು ಎಂದು ಹೇಳಲಾಗಿದೆ. ದೆಹಲಿಯ ಐಜಿ ನಿಲ್ದಾಣದಲ್ಲಿ ಪ್ರತ್ಯೇಕ ಜಾಗದಲ್ಲಿ ಇಳಿಸಿ ಪಾರ್ಕಿಂಗ್ ಮಾಡಲಾಗಿದೆ. ಅಲ್ಲದೆ ನಿಲ್ದಾಣದ ತಜ್ಞ ತಂತ್ರಾಧಿಕಾರಿ ಸಿಐಎಸ್ಎಫ್ ಹಾಗೂ ಎನ್ಎಸ್ಜಿ ಅಧಿಕಾರಿಗಳಿಂದ ತೀವ್ರ ತಪಾಸಣೆ ನಡೆಸಲಾಗುತ್ತಿದೆ.    
 
ಇನ್ನು ವಿಮಾನದಲ್ಲಿ 148 ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಪ್ರಯಾಣಿಕರು ಹಾಗೂ ಸಿಬ್ಬಂದಿ ಇಬ್ಬರನ್ನೂ ಕೂಡಲೇ ಸ್ಥಳಾಂತರಗೊಳಿಸಲಾಗಿದ್ದು, ಸುರಕ್ಷಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ವಿಮಾನದ ಒಳಭಾಗದಲ್ಲಿರುವ ಶೌಚಾಲಯದ ಕಿಟಕಿ ಗಾಜಿನ ಮೇಲೆ ಲಿಪ್ಸ್‌ಟಿಕ್‌ನಲ್ಲಿ ಈ ಬೆದರಿಕೆ ಸಂದೇಶ ಬರೆಯಲಾಗಿತ್ತು ಎನ್ನಲಾಗಿದ್ದು, ಇದನ್ನು ವಿಮಾನದ ಪೈಲಟ್ ನೋಡಿ ವಿಷಯವನ್ನು ಕಂಟ್ರೋಲ್ ರೂಮ್‌ಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ