ದೆಹಲಿ, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಶಂಕಿತನ ಬಂಧನ

ಶನಿವಾರ, 5 ಸೆಪ್ಟಂಬರ್ 2015 (13:08 IST)
ಬೆಂಗಳೂರು ಮತ್ತು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಎಸಗುವುದಾಗಿ ಹುಸಿ ಬೆದರಿಕೆ ಕರೆ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
 
ಕರೆ ಬಂದ್ ಮೊಬೈಲ್ ನಂಬರ್ ಯಾರ ಹೆಸರಿನಲ್ಲಿತ್ತೋ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಆತ ಆ ಸಿಮ್‌ನ್ನು ನಾನು ಬಳಸುತ್ತಿಲ್ಲ ಎನ್ನುತ್ತಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ.
 
ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಇಂದು ಮುಂಜಾನೆ  ಬೆಂಗಳೂರು ಮತ್ತು ದೆಹಲಿ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪರಿಣಾಮ ಹಲವು ವಿಮಾನಗಳು ವಿಳಂಬವಾಗಿ ಹಾರಿದವು.
 
ಶುಕ್ರವಾರ- ಶನಿವಾರದ ಮಧ್ಯರಾತ್ರಿ ಕರೆ ಮಾಡಿದ ದುಷ್ಕರ್ಮಿಯೊಬ್ಬ 6 ಅಂತರಾಷ್ಟ್ರೀಯ ವಿಮಾನಗಳಲ್ಲಿ ಬಾಂಬ್ ಸ್ಪೋಟ ನಡೆಸುವುದಾಗಿ ಬೆದರಿಕೆ ಹಾಕಿದ್ದ. 
 
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಶುಕ್ರವಾರ ಮಧ್ಯರಾತ್ರಿ 1.41ರ ಸುಮಾರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಏರ್ ಅರೇಬಿಯಾ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಹಾಕಿದ್ದ. ಈ ವಿಮಾನದಲ್ಲಿ ಸುಮಾರು 350 ಜನರು ಹಜ್ ಯಾತ್ರೆಗೆ ತೆರಳುತ್ತಿದ್ದರು. ವಿಮಾನ ಮತ್ತು ವಿಮಾನ ನಿಲ್ದಾಣದ ತಪಾಸಣೆ ನಡೆಸಿದ ಇದು ಹುಸಿ ಕರೆ ಎಂಬುದು ಖಚಿತವಾಯಿತು. ಬಳಿಕ 5.30 ಕ್ಕೆ ವಿಮಾನ ಪ್ರಯಾಣ ಬೆಳೆಸಿತು ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.  
 
ಇದೇ ಸಂದರ್ಭದಲ್ಲಿ ದೆಹಲಿ ವಿಮಾನ ನಿಲ್ದಾಣಕ್ಕೂ ಸಹ ಹುಸಿ ಬಾಂಬ್ ಕರೆ ಬಂದಿದ್ದರಿಂದ ತಪಾಸಣೆ ಬಳಿಕ ವಿಮಾನ ಹಾರಾಟಕ್ಕೆ ಅನುವು ಮಾಡಿಕೊಡಲಾಗಿತ್ತು.  

ವೆಬ್ದುನಿಯಾವನ್ನು ಓದಿ