ಬಾಗಲೂರಿನಲ್ಲಿರುವ ಇಟ್ಟಿಗೆ ಗೂಡು ಘಟಕದಿಂದ 26 ಜೀತದಾಳುಗಳ ಮುಕ್ತಿ: ಮಾಲೀಕನ ಬಂಧನ

ಮಂಗಳವಾರ, 3 ಮಾರ್ಚ್ 2015 (20:12 IST)
ಮಾನವ ಕಳ್ಳ ಸಾಗಣೆ ಪ್ರಕರಣದ ಹಿನ್ನೆಲೆಯಲ್ಲಿ ಬಾಗಲೂರಿನ ಇಟ್ಟಿಗೆ ಗೂಡೊಂದರ ಮಾಲೀಕನನ್ನು ಬಂಧಿಸಿ, ಒಡಿಶಾ ಮೂಲದ ಎಂಟು ಅಪ್ರಾಪ್ತ ಮಕ್ಕಳು ಸೇರಿದಂತೆ 26 ಜೀತ ಕಾರ್ಮಿಕರನ್ನು ಮಾನವ ಕಳ್ಳಸಾಗಾಣೆ ವಿರೋಧಿ ಘಟಕ ಹಾಗೂ ಜಿಲ್ಲಾಡಳಿತ ಮತ್ತು ಕರ್ನಾಟಕದ ಪೊಲೀಸರ ನೆರವಿನಿಂದ ರಕ್ಷಿಸಲಾಗಿದೆ.
 
ಘಟಕದ ಮಾಲೀಕನ ವಿರುದ್ಧ ಮಾನವ ಕಳ್ಳಸಾಗಾಣೆ ಮತ್ತು ಕಾರ್ಮಿಕ ಕಾಯ್ದೆ 1976ರ ಅನ್ವಯ ಕಾನೂನು ಉಲ್ಲಂಘನೆ ಪ್ರಕರಣಗಳನ್ನು ಬಾಗಲೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 
 
ಕಳೆದ ನಾಲ್ಕು ತಿಂಗಳುಗಳ ಹಿಂದೆ ಘಟಕದ ಮಾಲೀಕ ಓರಿಸ್ಸಾ ರಾಜ್ಯಕ್ಕೆ ತೆರಳಿ ಬೆಂಗಳೂರಿಗೆ ತಲುಪಿದ ಕೂಡಲೇ ಕಾರ್ಮಿಕರಿಗೆ ವಾರಕ್ಕೆ 1500 ರೂಪಾಯಿಗಳ ವೇತನ ನೀಡುವುದಾಗಿ ಭರವಸೆ ನೀಡಿದ್ದನು ಎನ್ನಲಾಗಿದೆ. ಆದರೆ, ಯಾವೊಬ್ಬ ಕಾರ್ಮಿಕನಿಗೆ ಮುಂಗಡ ಹಣ ಪಾವತಿಸಿಲ್ಲ ಎನ್ನುವುದು ಬಹಿರಂಗವಾಗಿದೆ. ಒರಿಸ್ಸಾದಿಂದ ಐದು ಕುಟುಂಬಗಳ 18 ಮಂದಿ ಕಾರ್ಮಿಕರನ್ನು ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ನಂತರ ಒಂದುವರೆ ತಿಂಗಳ ನಂತರ 8 ಮಂದಿ ಕಾರ್ಮಿಕರನ್ನು ಕರೆಸಲಾಗಿತ್ತು
 
ಏತನ್ಮಧ್ಯೆ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾದ ಕೂಡಲೇ ಮಾಲೀಕನು, ಪತಿ, ಪತ್ನಿ ಮತ್ತು ಅಪ್ರಾಪ್ತ ಬಾಲಕನಿರುವ ಕುಟುಂಬಕ್ಕೆ ಕೇವಲ 300 ರೂಪಾಯಿ ವೇತನ ನೀಡಿದ್ದಾನೆ. ಅದರಂತೆ ಪ್ರತಿದಿನ ಕೇವಲ 15 ರೂಪಾಯಿ ವೇತನ ಪಾವತಿಸಿದ್ದಾನೆ. ನಿಜವಾಗಿ ಕಾರ್ಮಿಕರ ಕೊಡಬೇಕಾಗಿದ್ದು 252 ರೂಪಾಯಿಗಳು.
 
ಒರಿಸ್ಸಾದಲ್ಲಿ ರಿಕ್ಷಾ ಚಾಲನೆ ಮಾಡುತ್ತಿದ್ದ ವ್ಯಕ್ತಿಯನ್ನು ಸಂಪರ್ಕಿಸಿದ ಮಧ್ಯವರ್ತಿ ವ್ಯಕ್ತಿ, ತಾನು ಒರಿಸ್ಸಾದವನಾಗಿದ್ದರಿಂದ ಕಾರ್ಮಿಕರು ನನ್ನ ಮೇಲೆ ವಿಶ್ವಾಸವಿಟ್ಟು ಬೆಂಗಳೂರಿಗೆ ಬರಬೇಕು ಎಂದು ಆಮಿಷ ಒಡ್ಡಿದ್ದಾನೆ ಎನ್ನಲಾಗಿದೆ. 
 

ಮಾನವ ಕಳ್ಳಸಾಗಾಣಿಕೆ ವಿರೋಧಿ ಘಟಕದ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡ ಕಾರ್ಮಿಕನೊಬ್ಬ, ಬೆಂಗಳೂರಿಗೆ ಕರೆತಂದು ವಂಚಿಸಲಾಗಿದೆ. ನನ್ನ ಕುಟುಂಬದ ಸದಸ್ಯರ ಊಟಕ್ಕೂ ಗತಿಯಿಲ್ಲದಂತಾಗಿದೆ. ನಾನು ಒರಿಸ್ಸಾದಲ್ಲಿದ್ದಾಗ ಮಕ್ಕಳ ತಿಂಡಿಗಾಗಿ ಪ್ರತಿದಿನ 60-70 ರೂಪಾಯಿಗಳನ್ನು ವೆಚ್ಚ ಮಾಡುತ್ತಿದ್ದೆ. ಇದೀಗ ಮಕ್ಕಳು ತಿಂಡಿ ತಿನಿಸುಗಳನ್ನು ಯಾಕೆ ತರುತ್ತಿಲ್ಲ ಎಂದು ಅಳುತ್ತಿವೆ ಎಂದು ತನ್ನ ಕಷ್ಟವನ್ನು ಬಿಚ್ಚಿಟ್ಟಿದ್ದಾನೆ.
 
ಕಾರ್ಮಿಕರ ಪ್ರಕಾರ, ವಾರದಲ್ಲಿ ಒಂದೂ ರಜೆ ನೀಡದೆ ಬೆಳಿಗ್ಗೆ 3 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಪ್ರತಿದಿನ ದುಡಿಯಬೇಕಾಗುತ್ತಿತ್ತು. ಕಾರ್ಮಿಕನೊಬ್ಬ ಉರಿಗೆ ತೆರಳುವುದಾಗಿ ಮಾಲೀಕನಿಗೆ ಹೇಳಿದಾಗ ಮಾಲೀಕನು ಜೀವಬೆದರಿಕೆಯೊಡ್ಡಿದ್ದಾನೆ. ಒಂದು ವೇಳೆ ಕಾರ್ಮಿಕನು ಮರಳಬೇಕಾದಲ್ಲಿ 25 ಸಾವಿರ ರೂಪಾಯಿ ಮುಂಗಡ ಹಣದ ಬದಲಾಗಿ 75 ಸಾವಿರ ರೂಪಾಯಿಗಳನ್ನು ದಂಡವಾಗಿ ನೀಡಬೇಕು ಎಂದು ಹೆದರಿಸಿದ್ದಾನೆ ಎನ್ನಲಾಗಿದೆ. 
 
ಕಾರ್ಮಿಕರಿಗೆ ಮುಂಗಡವಾಗಿ ಹಣ ನೀಡುವ ಮೂಲಕ ಅವರನ್ನು ಶೋಷಣೆಗೊಳಪಡಿಸುತ್ತಿದ್ದಾರೆ. ಮಾನವ ಕಳ್ಳ ಸಾಗಾಣಿಕೆ ಮಾಡಿದ್ದಲ್ಲದೇ ಅವರನ್ನು ಶೋಷಿಸುತ್ತಿರುವುದಕ್ಕೆ ಐಪಿಸಿ 370 ಕಾನೂನಿನ್ವಯ ಜೀವಾವಧಿಯವರೆಗೆ ಶಿಕ್ಷೆಯಾಗಲಿದೆ. ರಾಜ್ಯದಲ್ಲಿ ಕಠಿಣ ಶಿಕ್ಷೆಯನ್ನು ಜಾರಿಗೊಳಿಸುವ ಮೂಲಕ, ಘಟಕಗಳ ಮಾಲೀಕರು ಮಾನವ ಕಳ್ಳಸಾಗಾಣೆಯಲ್ಲಿ ತೊಡಗದೆ ನಿಯಮಬದ್ಧವಾಗಿ ಕಾರ್ಮಿಕರ ನೇಮಕ ಮಾಡಿಕೊಳ್ಳುವಂತಾಗಬೇಕು.  
 
ಕಳೆದ ತಿಂಗಳು ಮಾನವ ಕಳ್ಳ ಸಾಗಣೆ ಪ್ರಕರಣದ ಹಿನ್ನೆಲೆಯಲ್ಲಿ ಯಲಹಂಕದ ಇಟ್ಟಿಗೆ ಗೂಡೊಂದರ ಮಾಲೀಕನನ್ನು ಬಂಧಿಸಿ, ಒಡಿಶಾ ಮೂಲದ ಏಳು ಪುರುಷರು,ಎಂಟು ಮಹಿಳೆಯರು ಮತ್ತು 10 ಅಪ್ರಾಪ್ತ ಮಕ್ಕಳು ಸೇರಿದಂತೆ 25 ಜೀತ ಕಾಮಿರ್ಕರನ್ನು ರಕ್ಷಿಸಲಾಗಿತ್ತು.
 

ವೆಬ್ದುನಿಯಾವನ್ನು ಓದಿ