ಜನವಸತಿ ಇಲ್ಲದ ಜಾಗದಲ್ಲಿ ಸೇತುವೆ ನಿರ್ಮಾಣ: ಸರ್ಕಾರದ ಬೇಜವಾಬ್ದಾರಿ

ಮಂಗಳವಾರ, 7 ಜುಲೈ 2015 (11:21 IST)
ಉತ್ತರ ಕರ್ನಾಟಕ ಭಾಗದಲ್ಲಿ ಹರಿಯುವ ಕೃಷ್ಣಾ ನದಿಗೆ ಅಡ್ಡಲಾಗಿ ಹಳ್ಳಿಗಳ ಸಂರಕ್ಷಣೆಗೆಂದು ಸರ್ಕಾರ ಸೇತುವೆಯೊಂದನ್ನು ನಿರ್ಮಿಸುತ್ತಿದ್ದು, ಇದು ಪ್ರಸ್ತುತ ಅವೈಜ್ಞಾನಿಕ ಎಂಬ ಆರೋಪಗಳು ಕೇಳಿ ಬರುತ್ತಿವೆ. 
 
ಹೌದು, ಅನುದಾನ ಬಿಡುಗಡೆಯಾಗಿ ಸುಮಾರು 30 ವರ್ಷಗಳ ಬಳಿಕ ಸರ್ಕಾರವು ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಪ್ರಸ್ತುತ 35 ಕೋಟಿ ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಇದರ ಉದ್ದೇಶ ಕೃಷ್ಣಾನದಿಯು ತಂಬಿ ಹರಿದರೂ ಕೂಡ ಸುತ್ತಲಿನ ಹಳ್ಳಿಗಳ ಜನರು ಮತ್ತೊಂದೆಡೆಗೆ ಸರಾಗವಾಗಿ ಸಂಚರಿಸಲು ಅನುವಾಗಬೇಕು ಎಂಬುದು. ಈ ಸಲುವಾಗಿಯೇ ಜಿಲ್ಲೆಯ ತೊಂಗರಾಂಪುರ ಗ್ರಾಮದ ಬಳಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. 
 
ನದಿಯ ಹಿನ್ನೀರಿನ ಪ್ರವಾಹದಿಂದ ಮುಳುಗಡೆಯಾಗಿದ್ದ ಕುರುಕುಲ, ಕುರುವಕುರ್ದ ಸೇರಿದಂತೆ ಇಲ್ಲಿನ 5 ಹಳ್ಳಿಗಳನ್ನು ಈ ಹಿಂದೆ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಆದ್ದರಿಂದ ಪ್ರಸ್ತುತ ಇಲ್ಲಿ ಯಾವುದೇ ಜನರು ವಾಸಿಸುತ್ತಿಲ್ಲ. ಹೀಗಾಗಿ ಯಾವ ಪುರುಶಾರ್ಥಕ್ಕೆ ಈ ಸೇತುವೆ ನಿರ್ಮಿಸುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
 
ಇನ್ನು 1978ರಲ್ಲಿ ಕೃಷ್ಣಾನದಿಯು ತುಂಬಿ ಹರಿದ ಹಿನ್ನೆಲೆಯಲ್ಲಿ ಇಲ್ಲಿನ 5 ಗ್ರಾಮಗಳು ಮುಳುಗಡೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಸೇತುವೆ ನಿರ್ಮಾಣಕ್ಕೆಂದು ನೆರೆಯ ಆಂಧ್ರ ಪ್ರದೇಶ ಸರ್ಕಾರ 1978ರಲ್ಲಿ ಅನುಮೋದಿಸಿ 1997ರಲ್ಲಿ 35 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಪ್ರಸ್ತುತ ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಈಗಾಗಲೇ 10 ಬೃಹತ್ ಗಾತ್ರದ ಪಿಲ್ಲರ್‌ಗಳನ್ನು ನಿರ್ಮಿಸಿದೆ.  

ವೆಬ್ದುನಿಯಾವನ್ನು ಓದಿ