ಬ್ರಿಗೇಡ್ ಕದನ : ಮತ್ತೆ ಶುರುವಾಯಿತು ಈಶ್ವರಪ್ಪ, ಯಡಿಯೂರಪ್ಪ ಜಟಾಪಟಿ

ಶನಿವಾರ, 26 ನವೆಂಬರ್ 2016 (14:02 IST)
ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಲ್ಲಿ ಮುಂದುವರಿಯುವುದು ಬೇಡ ಎಂದು ಬಿಜೆಪಿ ಮುಖಂಡ ರಾಮಲಾಲ್ ಕಟ್ಟಪ್ಪಣೆ ಜಾರಿಗೊಳಿಸಿದ್ದರೂ, ಈಶ್ವರಪ್ಪ ಬ್ರಿಗೇಡ್‌ನಲ್ಲಿ ಮುಂದುವರಿದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೈಕಮಾಂಡ್‌ ಮೊರೆಹೋಗಿದ್ದಾರೆ.
 
ರಾಜ್ಯ ಬಿಜೆಪಿ ಘಟಕದ ಮುಖಂಡರು ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷದ ಪರ ಒಲವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಈಶ್ವರಪ್ಪ ಪಕ್ಷದ ಇಮೇಜ್‌ಗೆ ಧಕ್ಕೆ ತರುವಂತಹ ವರ್ತನೆ ತೋರುತ್ತಿದ್ದಾರೆ ಎಂದು ಯಡಿಯೂರಪ್ಪ ನೇರವಾಗಿ ಹೈಕಮಾಂಡ್‌ಗೆ ದೂರು ನೀಡಿದ್ದಾರೆ. 
 
ಬಿಜೆಪಿಯಲ್ಲಿಯೇ ಹಿಂದುಳಿದ ವರ್ಗಗಳ ಘಟಕಗಳಿದ್ದರೂ ಮತ್ತೊಂದು ಪ್ರತ್ಯೇಕ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟು ಉದ್ದೇಶವೇನು ಎಂದು ಪ್ರಶ್ನಿಸಿದ ಅವರು, ಈಶ್ವರಪ್ಪ ಸ್ವೇಚ್ಚಾಚಾರದ ವರ್ತನೆ ಪಕ್ಷಕ್ಕೆ ಮುಳುವಾಗಬಹುದು ಎಂದು ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎದುರು ಆತಂಕ ವ್ಯಕ್ತಪಡಿಸಿದ್ದಾರೆ.
 
ಈಶ್ವರಪ್ಪ ಅವರನ್ನು ಕರೆಸಿ ಎದುರಾಗಿರುವ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ಯಡಿಯೂರಪ್ಪ ಬಣದ ಮೂಲಗಳು ತಿಳಿಸಿವೆ.
 
ಬಿಜೆಪಿ ಕಾರ್ಯದರ್ಶಿ ರಾಮಲಾಲ್ ಮತ್ತು ಆರೆಸ್ಸೆಸ್ ಮುಖಂಡರ ಸೂಚನೆಗಳಿಗೆ ಕ್ಯಾರೆ ಎನ್ನದ ಕೆ.ಎಸ್.ಈಶ್ವರಪ್ಪ, ತಮ್ಮ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹೈಕಮಾಂಡ್ ಬೆಂಬಲ ಸೂಚಿಸಿದೆ ಎಂದು ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ