ರಾಜ್ಯದಲ್ಲಿ ಸಿಎಂ ಅಥವಾ ಸರ್ಕಾರ ಇದೆಯೋ, ಸತ್ತಿದೆಯೋ: ಬಿಎಸ್ ವೈ ವಾಗ್ದಾಳಿ

ಭಾನುವಾರ, 6 ಸೆಪ್ಟಂಬರ್ 2015 (13:25 IST)
ಬಿಬಿಎಂಪಿ ಚುಕ್ಕಾಣಿ ಹಿಡಿಯುವ ಸಂಬಂಧ ನಗರದ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. 
 
ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 30-40 ವರ್ಷಗಳಿಂದ ಹಿಂದೆಂದೂ ಕಾಣದ ಭೀಕರ ಬರಗಾಲ ಪ್ರಸ್ತುತ ಆವರಿಸಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಸಾಲಬಾಧೆ, ಕಬ್ಬಿಗೆ ಬೆಂಬಲ ಬೆಲೆ ಇಲ್ಲದಿರುವುದು ಮತ್ತು ಮೀಟರ್ ಬಡ್ಡಿ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಪರಿಣಾಮ 430 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಗಂಭೀರ ದುರಂತಗಳು ರಾಜ್ಯದಲ್ಲಿ ನಡೆದಿದ್ದರೂ ಕೂಡ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ಕವಲ ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮಾತ್ರ ಸಂಚರಿಸುತ್ತಿದ್ದಾರೆ ಎಂದು ಆರೋಪಿಸಿದರು. 
 
ಇದೇ ವೇಳೆ ಸಿಎಂ ಮತ್ತು ಸರ್ಕಾರ ಜನರ ಪಾಲಿಗೆ ಬದುಕಿದೆಯೋ ಸತ್ತಿದೆಯೋ ಎಂದು ಪ್ರಶ್ನಿಸಿದ ಅವರು, ಬೆಂಗಳೂರು ಮತ್ತು ಮೈಸೂರನ್ನು ಬಿಟ್ಟು ಬರಗಾಲವಿರುವ ಇತರೆ ರಾಜ್ಯಗಳಿಗೆ ಮುಖ್ಯಮಂತ್ರಿಗಳು ಅಥವಾ ಸಚಿವರು ಭೇಟಿ ನೀಡುತ್ತಿಲ್ಲ. ಸರ್ಕಾರ ಅಥವಾ ಸಿಎಂ ಬರಗಾಲವಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ರೈತರ ಸಮಸ್ಯೆಗಳ ಬಗ್ಗೆ ಎಂದಾದರೂ ಚರ್ಚೆ ನಡೆಸುವ ಪ್ರಾಮಾಣಿಕ ಪ್ರಯತ್ನವನ್ನೂ ಕೂಡ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ವೆಬ್ದುನಿಯಾವನ್ನು ಓದಿ