ಗ್ರಾಮಗಳಲ್ಲಿ ಸಾಮೂಹಿಕ ಶೌಚಾಲಯ ನಿರ್ಮಿಸಿ: ಸರ್ಕಾರಕ್ಕೆ ಕಾಗೇರಿ ಒತ್ತಾಯ

ಗುರುವಾರ, 2 ಜುಲೈ 2015 (12:30 IST)
ಇಲ್ಲಿನ ಸುವರ್ಣಸೌಧದಲ್ಲಿ ನಾಲ್ಕನೇ ದಿನವಾದ ಇಂದು ವಿಧಾನಸಭಾ ಕಲಾಪ ನಡೆಯುತ್ತಿದ್ದು, ಕಲಾಪದಲ್ಲಿ ಬಿಜೆಪಿ ಸದಸ್ಯ, ಮಾಜಿ ಸಚಿವ ವಿಶ್ವೇಶ್ವರ್ ಹೆಗ್ಗಡೆ ಕಾಗೇರಿ ಅವರು ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಹೆಚ್ಚು ಅನುಧಾನ ಅಗತ್ಯವಾಗಿದ್ದು, ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.  
 
ಕಲಾಪದಲ್ಲಿ ಮಾತನಾಡಿದ ಅವರು, ಇಲಾಖೆಯ ಅಡಿಯಲ್ಲಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಅಲ್ಲದೆ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಇಲಾಖೆಗೆ ಸರ್ಕಾರ ಹೆಚ್ಚು ಅನುದಾನ ಬಿಡುಗಡೆಗೊಳಿಸಬೇಕು. ಅಲ್ಲದೆ ಬೋರ್‌ವೆಲ್‌ಗಳನ್ನು ಕೊರೆಸಲಾಗುತ್ತಿದ್ದು, ಕಡಿಮೆ ದರ್ಜೆಯ ಪೈಪುಗಳನ್ನು ಅಳವಡಿಸಲಾಗುತ್ತಿದೆ. ಈ ಮೂಲಕ ಸರ್ಕಾರದ ಹಣವನ್ನು ದೋಚಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ರಮವನ್ನು ಪತ್ತೆ ಹಚ್ಚಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 
 
ಇದೇ ವೇಳೆ, ಆಡಳಿತ ಯಂತ್ರ ಸುಗಮವಾಗಿ ಸಾಗಬೇಕಾದಲ್ಲಿ ಅಗತ್ಯ ಸಿಬ್ಬಂದಿ ಅಗತ್ಯ. ಈ ಹಿನ್ನೆಲೆಯಲ್ಲಿ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಸರ್ಕಾರ ಕೂಡಲೇ ಭರ್ತಿ ಮಾಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. 

ವೆಬ್ದುನಿಯಾವನ್ನು ಓದಿ