ಬಸ್ ಪ್ರಯಾಣ ದರ: ಶೇ.3-4ರಷ್ಟು ಇಳಿಕೆ ?

ಶನಿವಾರ, 20 ಡಿಸೆಂಬರ್ 2014 (08:57 IST)
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ಬಸ್ ಪ್ರಯಾಣ ದರ ಇಳಿಯುವ ಸಾಧ್ಯತೆಯಿದೆ.
ಬಿಎಂಟಿಸಿ ಟಿಕೆಟ್​ ದರ ಪ್ರತಿಶತ 3 ರಿಂದ 4ರಷ್ಟು ಕಡಿಮೆಯಾಗುವ ಸಾಧ್ಯತೆಯಿದ್ದು, ಪ್ರತಿ ಹಂತಕ್ಕೆ 1 ರಿಂದ 2 ರೂಪಾಯಿ ಇಳಿಕೆಯಾಗಲಿದೆ. ಇನ್ನು, ಕೆಎಸ್​ಆರ್‌ಟಿಸಿಯ ಈಶಾನ್ಯ ಮತ್ತು ವಾಯುವ್ಯ ಘಟಕ ಬಸ್ಸುಗಳ ಟಿಕೆಟ್ ದರವೂ ಸಹ ಇದೇ ಪ್ರಮಾಣದಲ್ಲಿ ತಗ್ಗಿಸುವ ಸಂಭವ ಇದೆ. ಸಾರಿಗೆ ಇಲಾಖೆಗಳ ಮೂಲಗಳ ಪ್ರಕಾರ, ಇಂದು ಈ ಕುರಿತು ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.
 
ಇನ್ನೆರಡು ದಿನಗಳಲ್ಲಿ ಬಸ್ ಪ್ರಯಾಣದರ ಇಳಿಕೆಯಾಗಲಿದೆ ಎಂದು ವಿಧಾನಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಎರಡು ದಿನಗಳ ಹಿಂದೆ ಸ್ಪಷ್ಟನೆ ನೀಡಿದ್ದರು. 
 
ಡೀಸೆಲ್ ದರ ಇಳಿಕೆಯಾದ್ದರಿಂದ ಬಸ್ ಪ್ರಯಾಣ ದರವನ್ನು ಕೂಡ ಇಳಿಸಬೇಕೆಂದು ರಾಜ್ಯಾದ್ಯಂತ ಒತ್ತಾಯ ಕೇಳಿ ಬರುತ್ತಿದ್ದರೂ ಬಸ್ ಪ್ರಯಾಣ ದರ ಇಳಿಸಿರಲಿಲ್ಲ. ಚಾಲಕರ ವೇತನ ಹೆಚ್ಚಳ ಮುಂತಾದ ನೆಪಗಳನ್ನು ನೀಡಿ ಪ್ರಯಾಣ ದರ ಇಳಿಕೆಯಿಂದ ತಪ್ಪಿಸಿಕೊಂಡಿತ್ತು. 
 
ಈಗ ಮತ್ತೆ ಡೀಸೆಲ್ ದರ ಪ್ರತೀ ಲೀಟರ್‌ಗೆ 2 ರೂ. ಇಳಿಮುಖವಾದ್ದರಿಂದ ಬಸ್ ಪ್ರಯಾಣ ದರ ಇಳಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.  

ವೆಬ್ದುನಿಯಾವನ್ನು ಓದಿ