ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ನೂತನ ಎಸ್‌ಪಿಪಿಯಾಗಿ ಆಚಾರ್ಯ ನೇಮಕ

ಮಂಗಳವಾರ, 28 ಏಪ್ರಿಲ್ 2015 (16:08 IST)
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿರುದ್ಧ ದಾಖಲಾಗಿರುವ ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಇಂದು ನೂತನ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ನೇಮಿಸಿದೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ರಾಜ್ಯದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರನ್ನು ಪ್ರಕರಣದ ಎಸ್‌ಪಿಪಿಯನ್ನಾಗಿ ನೇಮಿಸಿದ್ದು, ಈ ಹಿಂದೆ ಈ ಹುದ್ದೆಯನ್ನು ಭವಾನಿ ಸಿಂಗ್ ಅವರು ನಿಭಾಯಿಸುತ್ತಿದ್ದರು.
 
ಹಿನ್ನೆಲೆ: ಪ್ರಕರಣದ ಎಸ್‌ಪಿಪಿ ಹುದ್ದೆಗೆ ಖುದ್ದು ತಮಿಳುನಾಡು ಸರ್ಕಾರವೇ ವಕೀಲ ಭವಾನಿ ಸಿಂಗ್ ಅವರನ್ನು ನೇಮಿಸಿತ್ತು. ಆದರೆ ಈ ನಿಯಮ ಸರಿಯಲ್ಲ. ಎಸ್ಪಿಪಿ ಅವರನ್ನು ಬದಲಿಸಬೇಕು ಎಂದು ಒತ್ತಾಯಿಸಿ ಪ್ರಕರಣದ ಫಿರ್ಯಾದುದಾರ, ಡಿಎಂಕೆ ನಾಯಕ ಅನ್ಬಳಗನ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. 
 
ಈ ಹಿನ್ನೆಲೆಯಲ್ಲಿ ನಿನ್ನೆ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಪ್ರಕರಣವು ಕರ್ನಾಟಕ ಸರ್ಕಾರ ಅಥವಾ ಹೈಕೋರ್ಟ್‌ಗೆ ಸಂಬಂಧಿಸಿರುವುದಾಗಿದ್ದು, ಈ ಸಂಬಂಧ ಕರ್ನಾಟಕ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕಿದೆ. ತಮಿಳುನಾಡು ಸರ್ಕಾರದ ನಡೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ ಭವಾನಿ ಸಿಂಗ್ ಅವರ ನೇಮಕವನ್ನು ಅಸಿಂಧುಗೊಳಿಸಿತ್ತು.  ಈ ಹಿನ್ನೆಲೆಯಲ್ಲಿ ಸರ್ಕಾರವು ಬಿ.ವಿ.ಆಚಾರ್ಯ ಅವರನ್ನು ಎಸ್‌ಪಿಪಿಯನ್ನಾಗಿ ನೇಮಿಸಿದೆ.  

ವೆಬ್ದುನಿಯಾವನ್ನು ಓದಿ