ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಣ ಹೆಂಡ ನೀಡಿ ಗೆದ್ದಿದೆ: ಡಿವಿಎಸ್

ಬುಧವಾರ, 27 ಆಗಸ್ಟ್ 2014 (12:13 IST)
ರಾಜ್ಯ ಉಪಚುನಾವಣೆ ಫಲಿತಾಂಸ ಕುರಿತು ಪ್ರತಿಕ್ರಯಿಸಿರುವ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರು, ಕಾಂಗ್ರೆಸ್ ಜನರನ್ನು ಬೆದರಿಸಿ, ಹಣ ನೀಡಿ ಚುನಾವಣೆ ಗೆದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
 
 ಕೊಡಗು ಜಿಲ್ಲೆ ಸೋಮವಾರಪೇಟೆಯಲ್ಲಿ ಮಾತನಾಡಿದ ಅವರು, ಉಪಚುನಾವಣೆ ಫಲಿತಾಂಶ ಮುಂದಿನ ರಾಜಕೀಯದ ಮೇಲೆ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ಜನರನ್ನು ಬೆದರಿಸಿ ಮತ್ತು ಹಣ ನೀಡಿ ಗೆದ್ದಿದೆ. ಹಾಗಾಗಿ, ಇದು ನಮ್ಮ ಮುಂದಿನ ರಾಜಕೀಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ.
 
ಸೋಲಿನ ಬಗ್ಗೆ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿದೆ, ಈ ಸಂಬಂಧ ಸಭೆ ನಡೆಸಲಿದೆ ಎಂದ ಅವರು, ಕಾಂಗ್ರೆಸ್ ಆಂತರಿಕ ಗೊಂದಲದಲ್ಲಿ ಮುಳುಗಿ ಹೋಗಿದೆ ಎಂದಿದ್ದಾರೆ.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನಡುವೆ ಯುದ್ಧ ನಡೆಯುತ್ತಿದೆ. ಹೀಗಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಅವರು ವಿಷಾಧಿಸಿದ್ದಾರೆ.
 
ನೂರಾರು ಕೋಟಿ ರುಪಾಯಿ ಭ್ರಷ್ಟಾಚಾರ ನಡೆಯುತ್ತಿದೆ. ಅನ್ನಭಾಗ್ಯ ಯೋಜನೆಯ ಭ್ರಷ್ಟಾಚಾರಕ್ಕೆ ದಾರಿಯಾಗಿದೆ ಎಂದ ಅವರು ಸಿಎಂರಿಂದ ನಾವು ನಿರೀಕ್ಷಿಸಿದ್ದ ಶೇ.10ರಷ್ಟು ಕೆಲಸವಾಗಿಲ್ಲ ಎಂದು ದೂರಿದ್ದಾರೆ.
 
ಬಿಜೆಪಿ ಸಂಸದೀಯ ಮಂಡಳಿ ಪುನಾರಚನೆ ಕುರಿತು ಮಾತನಾಡಿದ ಅವರು, ಬಿಜೆಪಿಯಲ್ಲಿ ಹಿರಿಯರನ್ನು ಕಡೆಗಣಿಸಿಲ್ಲ. ಹೊಸತನಕ್ಕೆ ಆದ್ಯತೆ ನೀಡಿ ಸಂಘಟನೆಗೆ ಶಕ್ತಿ ತುಂಬಬೇಕಿದೆ. ಹಾಗಾಗಿ, ಹಿರಿಯರಿಗಾಗಿ ಪ್ರತ್ಯೇಕ ಸಮಿತಿ ರಚನೆ ಮಾಡಲಾಗಿದೆ. ಹಿರಿಯರಿಂದ ಮಾರ್ಗದರ್ಶನ ಪಡೆಯಲಾಗುವುದು. ಕಿರಿಯರ ಚಟುವಟಿಕೆ ಕ್ರೋಡಿಕರಿಸಲು ಪ್ರಮುಖ ಆದ್ಯತೆ ನೀಡುವ ಸಲುವಾಗಿ ಬಿಜೆಪಿ ಸಂಸದೀಯ ಮಂಡಳಿ ರಚನೆಯಾಗಿದೆ ಎಂದು ಸದಾನಂದಗೌಡ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ