ಸಿಎ ನಿವೇಶನ ಖಾಸಗಿಯವರಿಗೆ ಮಾರಾಟ: ಬಿಡಿಎಗೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್

ಭಾನುವಾರ, 26 ಏಪ್ರಿಲ್ 2015 (15:55 IST)
ನಾಗರೀಕರ ಸೌಲಭ್ಯಕ್ಕೆಂದು ಮೀಸಲಿಟ್ಟ ನಿವೇಶನವನ್ನು ಖಾಸಗಿ ಬಿಲ್ಡರ್‌ಗಳಿಗೆ ಮಾರಾಟ ಮಾಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಇಂದು ನೋಟಿಸ್ ಜಾರಿಗೊಳಿಸಲಾಗಿದೆ.

ಸಿಎ ನಿವೇಶನವನ್ನ ಖಾಸಗಿ ಬಿಲ್ಡರ್‍ಗೆ ಮಾರಿರುವುದು ಬಿಡಿಎ ಕಾಯ್ದೆ  ಸೆಕ್ಷನ್ 38(ಎ)ನ ಪ್ರಕಾರ ಉಲ್ಲಂಘಿಸಿ 2014ರ ಆ.1ರಂದೇ ಮಾರಾಟ ಪತ್ರವನ್ನೂ ನೀಡಲಾಗಿದೆ ಎಂದು ಆರೋಪಿಸಿ ವಕೀಲ ರಂಜಲ್ ರಘುರಾಮ್ ಶೆಣೈ ಸೇರಿದಂತೆ ಇತರೆ 12 ಮಂದಿ ಪಿಐಎಲ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾ. ಎಸ್.ಕೆ.ಮುಖರ್ಜಿ ಮತ್ತು ನ್ಯಾ.ಬಿ.ವಿ. ನಾಗರತ್ನ ಅವರಿದ್ದ ದ್ವಿ ಸದಸ್ಯ ವಿಭಾಗೀಯ ಪೀಠ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ: ನಗರದ ಕೋರಮಂಗಲದ ಸಮೀಪ ಜಕ್ಕಸಂದ್ರದ ಬಳಿ ಇರುವ ನಾಗರೀಕರ ಕೋಟಾದಡಿ ಶ್ರೀಧರ್ ಮೂರ್ತಿ ಎಂಬುವವರಿಗೆ ನಿವೇಶನವನ್ನು ಹಂಚಿಕೆ ಮಾಡಲಾಗಿತ್ತು. ಬಳಿಕ ಆ ನಿವೇಶನವನ್ನು ಬಿಲ್ಡರ್ ಕಯಾಲ್‍ತೀರ್ಮಾ ಎಂಬುವವರಿಗೆ ಮಾರಾಟ ಮಾಡಲಾಗಿತ್ತು. ಆದರೆ ಸರ್ಕಾರದ ನಿಯಮಗಳ ಪ್ರಕಾರ, ಸಿಎ ನಿವೇಶನಕ್ಕೆಂದು ಮೀಸಲಿಟ್ಟ ಜಾಗವನ್ನು ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಬಳಸಬೇಕು. ಆದರೆ ನಿವೇಶನ ಪಡೆದ ಶ್ರೀದರ್ ಮೂರ್ತಿ ಅವರು, ಖಾಸಗಿ ವ್ಯಕ್ತಿಗಳಿಗೆ ಮಾರಿದ್ದಾರೆ. ಅದಕ್ಕೆ ಬಿಡಿಎ ಸಹಕಾರ ಕೂಡ ಇದೆ ಎಂಬುದು ಆರೋಪವಾಗಿದೆ.

ವೆಬ್ದುನಿಯಾವನ್ನು ಓದಿ