ವಿಧಾನಸೌಧದತ್ತ ಸಚಿವಾಕಾಂಕ್ಷಿಗಳ ದಂಡು: ಸಿಎಂ-ಪರಮ್ ಇಕ್ಕಟ್ಟಿನಲ್ಲಿ

ಶುಕ್ರವಾರ, 17 ಅಕ್ಟೋಬರ್ 2014 (14:02 IST)
ಮೊದಲು ನಿಗಮ-ಮಂಡಳಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿ. ಅನಂತರ ಸಂಪುಟ ವಿಸ್ತರಣೆ ಕುರಿತು ತೀರ್ಮಾನ ಕೈಗೊಳ್ಳೋಣ ಎಂದು ರಾಜ್ಯ ಕಾಂಗ್ರೆಸ್‌ ಪ್ರಭಾರಿ ದಿಗ್ವಿಜಯ ಸಿಂಗ್‌ ಸೂಚಿಸಿದ್ದಾರೆ. 
 
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಅವರು ಬುಧವಾರ ದಿಗ್ವಿಜಯ ಸಿಂಗ್‌ ಭೇಟಿ ಮಾಡಿದ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಸಂಪುಟ ಪುನಾರಚನೆಗಿಂತ ವಿಸ್ತರಣೆಗೆ ಒಲವು ತೋರಿದರು ಎಂದು ಮೂಲಗಳು ಹೇಳಿವೆ. 
 
ಈ ಹಿನ್ನೆಲೆಯಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳಿಗೆ ಪರಿಶಿಷ್ಟರು (ಪರಮೇಶ್ವರ್‌), ಕುರುಬ (ಎಚ್‌.ವೈ. ಮೇಟಿ), ಲಿಂಗಾಯತ (ಉತ್ತರ ಕರ್ನಾಟಕ ಭಾಗದ ಪ್ರಮುಖ ನಾಯಕರೊಬ್ಬರು) ಹಾಗೂ ಬಲಿಜಿಗ ಜನಾಂಗಗಳಿಗೆ ಅವಕಾಶ ನೀಡುವ ಬಗ್ಗೆ ಮುಖ್ಯಮಂತ್ರಿ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. 
 
ಪರಂ ಪರಿಗಣನೆ- ದಿಗ್ವಿ: ಈ ನಡುವೆ, ಶೀಘ್ರದಲ್ಲೇ ಸಚಿವ ಸಂಪುಟ ಪುನಾರಚನೆ ಆಗಲಿದೆ. ಆ ಸಂದರ್ಭದಲ್ಲಿ ಪರಮೇಶ್ವರ್‌ ಅವರನ್ನೂ ಪರಿಗಣಿಸಲಾಗುವುದು. ಆದರೆ ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ಮುಖ್ಯಮಂತ್ರಿಯವರಿಗೆ ಬಿಟ್ಟಿದ್ದು ಎಂದು ದಿಗ್ವಿಜಯ ಸಿಂಗ್‌ ಸುದ್ದಿಗಾರರೆದುರು ಹೇಳಿದರು. 
 
ಪರಮೇಶ್ವರ್‌ ಅವರಿಗೆ ಡಿಸಿಎಂ ಹುದ್ದೆ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಪರಮೇಶ್ವರ್‌ ನೇರವಾಗಿ ಬೇಡಿಕೆ ಇಟ್ಟಿಲ್ಲ. ಅದು ಅವರ ಬೆಂಬಲಿಗರ ಬೇಡಿಕೆ ಅಷ್ಟೆ. ಆದರೆ, ಅಂತಿಮವಾಗಿ ಹೈಕಮಾಂಡ್‌ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಎಂದರು. 
 
ಸಿದ್ದು-ಸಿಎಂ ನಡುವೆ ಸಮನ್ವಯತೆ ಇಲ್ಲ ಅನ್ನುವುದು ಸುಳ್ಳು. ಅವರಿಬ್ಬರೂ ಒಂದೇ ದೋಣಿಯ ನಾವಿಕರು ಇದ್ದಂತೆ ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದರು. 
 
ಖರ್ಗೆ, ಷರೀಫ್, ಕೋಳಿವಾಡ ಜತೆ ದಿಗ್ವಿ ಚರ್ಚೆ: ಈ ನಡುವೆ, ದಿಗ್ವಿಜಯ ಸಿಂಗ್‌ ಅವರನ್ನು ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಮುಖಂಡ ಜಾಫ‌ರ್‌ ಷರೀಫ್, ಸಚಿವರಾದ ಸತೀಶ್‌ ಜಾರಕಿಹೊಳಿ, ಅಂಬರೀಷ್‌, ಶಾಸಕರಾದ ಕೆ.ಬಿ. ಕೋಳಿವಾಡ ಮತ್ತು ಎನ್‌.ಎ. ಹ್ಯಾರೀಸ್‌ ಭೇಟಿ ಮಾಡಿದರು. 
 
ಮೋದಿಗೆ ಮತ್ತೆ ದಿಗ್ವಿಜಯ ಹೊಗಳಿಕೆ 
 
ಬೆಂಗಳೂರು: ಇತ್ತೀಚೆಗಷ್ಟೇ ಕಾಶ್ಮೀರ ಪ್ರವಾಹದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ ರೀತಿಯನ್ನು ಹೊಗಳಿದ್ದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್‌, ಈಗ ಮತ್ತೆ ಪ್ರಧಾನಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇಲ್ಲಿ ಗುರುವಾರ ಅವರು ಸಮಾರಂಭವೊಂದರಲ್ಲಿ ಮಾತನಾಡಿ, ಜಪಾನ್‌ ಜತೆಗಿನ ಸಂಬಂಧ ವೃದ್ಧಿಗೆ ಮೋದಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಸ್ವಾಗತಿಸಿದರು. 'ಮೋದಿಯವರ ಇತ್ತೀಚಿನ ಜಪಾನ್‌ ಭೇಟಿ ಒಂದು ಉತ್ತಮ ಹೆಜ್ಜೆ. ಅದನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ. ಅದೇ ರೀತಿ ಜಪಾನ್‌ ಪ್ರಧಾನಿಯೂ ನಮ್ಮ ದೇಶಕ್ಕೆ ಭೇಟಿ ನೀಡಿದ್ದಾರೆ. ಈ ಭೇಟಿಯಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‌ ಪ್ರಧಾನಿ ನಡುವೆ ಉತ್ತಮ ವೈಯಕ್ತಿಕ ಬಾಂಧ್ಯವ ಬೆಳೆದಿದೆ' ಎಂದರು. 'ಈ ಸಂಬಂಧ ಮುಂದುವರಿಯಬೇಕು. ಆ ಮೂಲಕ ಉಭಯ ದೇಶಗಳ ನಡುವೆ ಕೌಶಲ್ಯಾಭಿವೃದ್ಧಿ ಪ್ರಯತ್ನಗಳು ಹೆಚ್ಚಾಗಬೇಕು. ವಾಣಿಜ್ಯ ಮತ್ತು ರಾಜತಾಂತ್ರಿಕ ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳಬೇಕು ಎನ್ನುವುದು ನನ್ನ ಬಯಕೆ' ಎಂದು ದಿಗ್ವಿಜಯ್‌ ಸಿಂಗ್‌ ಹೇಳಿದರು. 
 
ದೋಸೆ ತಿಂದ ಸಿಎಂ-ಪರಂ! 
 
ರಾಜ್ಯ ಉಸ್ತುವಾರಿ ದಿಗ್ವಿಜಯ ಸಿಂಗ್‌ ಅವರನ್ನು ಭೇಟಿ ಮಾಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರು ಒಟ್ಟಾಗಿ ಬೆಂಗಳೂರಿನ ಪ್ರತಿಷ್ಠಿತ ಜನಾರ್ದನ ಹೊಟೇಲ್‌ಗೆ ತೆರಳಿ ದೋಸೆ -ಚಹಾ ಸೇವನೆ ಮಾಡಿದರು. ಈ ಸಂದರ್ಭದಲ್ಲಿ ಅವರು ನಿಗಮ-ಮಂಡಳಿ ಹಾಗೂ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿದರು. ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, 'ಒಟ್ಟಿಗೇ ಇದ್ರೂ ಪ್ರಶ್ನಿಸ್ತೀರಿ, ಬೇರೆ ಇದ್ರೂ ಪ್ರಶ್ನಿಸ್ತೀರಿ..' ಎಂದು ಉಭಯ ನಾಯಕರು ಚಟಾಕಿ ಹಾರಿಸಿದರು. 

ವೆಬ್ದುನಿಯಾವನ್ನು ಓದಿ