ಶಾಲೆಯಲ್ಲಿ ಜಾತಿ ಬಿಕ್ಕಟ್ಟು: ವಾರದಿಂದ ಬಿಸಿಯೂಟ ಸವಿಯದ ಸವರ್ಣೀಯರ ಮಕ್ಕಳು

ಶುಕ್ರವಾರ, 28 ನವೆಂಬರ್ 2014 (18:16 IST)
ರಾಜ್ಯದಲ್ಲಿ ಅಪರೂಪದಲ್ಲಿ ಅಪರೂಪದ ಪ್ರಕರಣ ಎಂಬಂತೆ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರದಲ್ಲಿ ಸವರ್ಣೀಯರು ಹಾಗೂ ಕೆಳ ವರ್ಗದವರ ನಡುವೆ ಪ್ರಸ್ತುತ ಬಿಕ್ಕಟ್ಟು ಏರ್ಪಟ್ಟಿದ್ದು, ದಲಿತ ಮಹಿಳೆಯೋರ್ವರು ತಯಾರಿಸಿದ್ದ ಅಡುಗೆ ಎಂಬ ಕಾರಣವೊಡ್ಡಿ ಸವರ್ಣೀಯರ ಮಕ್ಕಳು ಶಾಲೆಯಲ್ಲಿ ನೀಡಲಾಗುವ ಬಿಸಿಯೂಟ ತಿನ್ನದ ಸಂಗತಿ ಇಲ್ಲಿನ ಕುಪ್ಪೇಗಾಲ ಎಂಬ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. 
 
ಈ ಗ್ರಾಮವು ಮೈಸೂರು ತಾಲೂಕಿನಲ್ಲಿದ್ದು, ಈ ಶಾಲೆಯಲ್ಲಿ ಓದುತ್ತಿರುವ ಸವರ್ಣೀಯರ ಮಕ್ಕಳು ಕೆಳ ವರ್ಗದ ಮಹಿಳೆ ಊಟ ತಯಾರಿಸಿದ್ದಾರೆ ಎಂಬ ಕಾರಣದಿಂದ ಕಳೆದ ಒಂದು ವಾರದಿಂದ ಸರ್ಕಾರ ನೀಡುವ ಬಿಸಿಯೂಟವನ್ನು ತಿನ್ನುತ್ತಿಲ್ಲ ಎಂದು ಶಾಲೆಯ ಮೂಲಗಳು ತಿಳಿಸಿವೆ. ಇಲ್ಲಿ ಗಮನಿಸಬೇಕಾದ ಅಂಶವೊಂದಿದ್ದು, ಸಿಎಂ ಸಿದ್ದರಾಮಯ್ಯನವರೂ ಕೂಡ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು ಎನ್ನಲಾಗಿದೆ. ಆದರೆ, ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾಭ್ಯಾಸ ಮಾಡಿದ್ದ ಶಾಲೆಯಲ್ಲಿ ಈ ರೀತಿಯ ಸಂಗತಿಯೇ ಎಂದು ಸಾರ್ವಜನಿಕರು ಅಚ್ಚರಿಗೊಳಗಾಗಿದ್ದಾರೆ. 
 
ವಿಷಯ ತಿಳಿಯುತ್ತಿದ್ದಂತೆ ಶಾಲೆಯ ಎಸ್‌ಡಿಎಂಸಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸವರ್ಣೀಯ ಸಮುದಾಯದೆಂದಿಗೆ ಅನುಸಂಧಾನ ಸಭೆ ಏರ್ಪಡಿಸಲಾಗಿತ್ತಾದರೂ ಸವರ್ಣೀಯರು ಸಭೆಗೆ ಸಮ್ಮತಿ ಸೂಚಿಸದ ಹಿನ್ನೆಲೆ ಸಭೆ ವಿಫಲಗೊಂಡಿದೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ