ಕಾವೇರಿ ವಿವಾದ: ಸುಪ್ರೀಂಕೋರ್ಟ್‌ ತೀರ್ಪು ರಾಜ್ಯಕ್ಕೆ ಮಾರಕ ಎಂದ ಸಂಸದ ಡಿ.ಕೆ. ಸುರೇಶ್

ಶುಕ್ರವಾರ, 30 ಸೆಪ್ಟಂಬರ್ 2016 (14:14 IST)
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪು ರಾಜ್ಯಕ್ಕೆ ಮಾರಕವಾಗಿದ್ದು, ರಾಜ್ಯ ಸರಕಾರ ಕಾವೇರಿ ವಿಚಾರದಲ್ಲಿ ಉತ್ತಮ ನಡೆ ಅನುಸರಿಸುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಹೇಳಿದರು. 
 
ರಾಮನಗರದ ನಗರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಸಂಸದರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ರವಿಕುಮಾರ್ ಹಾಗೂ ಸಮೀನಾ ತಾಜ್ ಅವರಿಗೆ ಅಭಿನಂದಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡುತ್ತಿರುವ ತೀರ್ಪಿನಿಂದ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗಿದೆ. ಈ ತೀರ್ಪು ರಾಜ್ಯಕ್ಕೆ ಮಾರಕವಾದದ್ದು ಎಂದು ವಿಷಾದ ವ್ಯಕ್ತಪಡಿಸಿದರು. 
 
ಕಾವೇರಿ ವಿಚಾರಕ್ಕೆ ಸಂಬಂಧಿಸಿಂದಂತೆ ವಿಶೇಷ ವಿಧಾನ ಮಂಡಲ ಅಧಿವೇಶನದಲ್ಲಿ ಕೈಗೊಂಡಿರುವ ಸರ್ವಾನುಮತದ ನಿರ್ಣಯ ಹಾಗೂ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿರುವುದು ಸೂಕ್ತ ಕ್ರಮವಾಗಿದೆ ಎಂದು ಹೇಳಿದರು. 
 
ರಾಜ್ಯದ ರೈತರ ಹಿತ ಕಾಯ್ದುಕೊಳ್ಳಲು ಕಾವೇರಿಯಿಂದ ತಮಿಳುನಾಡಿಗೆ ನೀರು ಹರಿಸದಂತೆ ನಿರ್ಣಯ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ನಿಲುವು ಸ್ವಾಗತಾರ್ಹ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಹೇಳಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ