ಆದೇಶ ಮರುಪರಿಶೀಲಿಸುವಂತೆ ಲೋಕಾಯುಕ್ತರಿಗೆ ಸಿಸಿಬಿ ಪತ್ರ

ಭಾನುವಾರ, 28 ಜೂನ್ 2015 (10:44 IST)
ಭ್ರಷ್ಟಾಚಾರ ಆರೋಪ ಪ್ರಕರಣವೊಂದರ ತನಿಖೆಯ ಜವಾಬ್ದಾರಿಯನ್ನು ತಮಗೆ ನೀಡಿರುವ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ನಡೆಸುವಂತೆ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಅವರಿಗೆ ಸಿಸಿಬಿ ಜಂಟಿ ಆಯುಕ್ತ ಚಂದ್ರಶೇಖರ್ ನಿನ್ನೆ ಪತ್ರ ಬರೆದಿದ್ದಾರೆ.
 
ಲೋಕಾಯುಕ್ತ ಸಂಸ್ಥೆ ಹಾಗೂ ಲೋಕಾಯುಕ್ತರ ವಿರುದ್ಧವೇ ಕೇಳಿ ಬಂದಿರುವ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ನಡೆಸುವ ಜವಾಬ್ದಾರಿಯನ್ನು ಮುಖ್ಯ ಲೋಕಾಯುಕ್ತ ನ್ಯಾ.ವೈ.ಭಾಸ್ಕರ್‌ ರಾವ್ ಅವರು ಸಿಸಿಬಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಜಂಟಿ ಆಯುಕ್ತ ಚಂದ್ರಶೇಖರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿತ್ತು. ಆದರೆ ಇದು ಲೋಕಾಯುಕ್ತರ ವಿರುದ್ಧ ಇರುವ ಪ್ರಕರಣವಾದ್ದರಿಂದ, ಅಲ್ಲದೆ ಉಪ ಲೋಕಾಯುಕ್ತರ ಸಲಹೆ ಪಡೆದಿಲ್ಲ ಎಂಬ ಆರೋಪ ಸಿಸಿಬಿಯನ್ನು ಕ್ಕಟ್ಟಿಗೆ ಸಿಲುಕಿಸಿತ್ತು. ಅಲ್ಲದೆ ಮುಖ್ಯ ಲೋಕಾಯುಕ್ತರ ನಿರ್ಧಾರದ ವಿರುದ್ಧ ಅಪಸ್ವರ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಆಯುಕ್ತರು ಪತ್ರ ಬರೆದಿದ್ದು, ಮರು ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. 
 
ಇನ್ನು ಚಂದ್ರಶೇಖರ್ ಅವರ ಮಾವ ರಾಮಾಂಜನೇಯ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿದ್ದರು. ಆ ಪ್ರಕರಣದ ತನಿಖೆ ಇನ್ನೂ ತನಿಖಾ ಹಂತದಲ್ಲಿದ್ದು, ಇದೇ ಕಾರಣದಿಂದಲೇ ಪತ್ರ ಬರೆದಿದ್ದಾರೆ ಎಂದೂ ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ