ರೂ. 45 ಸಾವಿರ ಕೋಟಿ ಸಾಲ ರೈತರ ತಲೆಯ ಮೇಲಿದೆ

ಶುಕ್ರವಾರ, 9 ಡಿಸೆಂಬರ್ 2016 (10:14 IST)
ಬರಗಾಲದ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ಶಾಸಕರು ಪಕ್ಷಭೇದ ಮರೆತು ಒತ್ತಾಯಿಸುತ್ತಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೇಂದ್ರದ ನೆರವು ಅಗತ್ಯ. ಸಹಕಾರ ಸಂಘಗಳ ಮೂಲಕ ರೈತರು 10 ಸಾವಿರ ಕೋಟಿ ರೂ.ಗಳ ಸಾಲ ಪಡೆದಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳು 35 ಸಾವಿರ ಕೋಟಿ ರೂ. ವಿತರಿಸಿವೆ. ಒಟ್ಟಾರೆ 45 ಸಾವಿರ ಕೋಟಿ ರೂಪಾಯಿಗಳ ಸಾಲ ರೈತರ ತಲೆಯ ಮೇಲಿದೆ. ಕೇಂದ್ರ ನೆರವಾದರೆ ಸಾಲ ಮನ್ನಾ ಮಾಡಲು ನಾವು ಸಿದ್ಧ. ಈ ಕುರಿತು ಪ್ರಧಾನಿಯವರಿಗೂ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೆ ಈ ವರೆಗೆ ಸ್ಪಂದನೆ ಸಿಕ್ಕಿಲ್ಲ. ಈ ಬಗ್ಗೆಯೂ ಸಂಸದರು ಒತ್ತಡ ಹೇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
 
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಕೆಲಸದ ದಿನಗಳ ಹೆಚ್ಚಳಕ್ಕೂ ಕೇಂದ್ರಕ್ಕೆ ಮನವಿ ಮಾಡಿದೆ. ಜೊತೆಗೆ ಯೋಜನೆಯಲ್ಲಿ ಎರಡನೇ ಕಂತಿನ ಅನುದಾನ ಇನ್ನೂ ನಮಗೆ ಲಭ್ಯವಾಗಿಲ್ಲ. ಈ ಬಗ್ಗೆಯೂ ಸಂಸದರು ಕೇಂದ್ರದ ಗಮನ ಸೆಳೆಯಬೇಕು ಎಂದು ಮುಖ್ಯಮಂತ್ರಿಯವರು ಮನವಿ ಮಾಡಿದರು.
 
500 ಮತ್ತು ಒಂದು ಸಾವಿರ ಮುಖಬೆಲೆಯ ನೋಟುಗಳು ರದ್ಧಾದ ಬಳಿಕ ರೈತರು, ಕೂಲಿ ಕಾರ್ಮಿಕರಿಗೆ ಭಾರಿ ತೊಂದರೆಯಾಗಿದೆ. ಸಹಕಾರ ಸಂಸ್ಥೆಗಳು ರೈತರಿಂದ ಠೇವಣಿ ಸ್ವೀಕಾರ ಮಾಡುತಿಲ್ಲ. ಈ ಬಗ್ಗೆ ಹಣಕಾಸು ಸಚಿವರಿಗೆ ಮೂರು ಪತ್ರಗಳನ್ನು ಬರೆಯಲಾಗಿದೆ. ಅದಕ್ಕೂ ಉತ್ತರ ಬಂದಿಲ್ಲ ಎಂದು ತಿಳಿಸಿದರು.
 
ನಾನಾ ಯೋಜನೆಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಪ್ರಸ್ತಾವನೆಗಳು ಕೇಂದ್ರದ ಮುಂದೆ ಹಲವಾರು ದಿನಗಳಿಂದ ಬಾಕಿ ಉಳಿದಿವೆ. ಸಂಸದರು ತಮ್ಮ ಪ್ರಭಾವ ಬಳಸಿ ಮಂಜೂರಾತಿ ಕೊಡಿಸಬೇಕು ಎಂದು ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ